ನಾಲ್ಕು ವರ್ಷವಾದರೂ ಸಮಸ್ಯೆ ಪರ್ವ ಕುಗ್ಗಿಲ್ಲ
ಗುರುಮಠಕಲ್: ಯಾದಗಿರಿ ಜಿಲ್ಲೆಯಾಗಿ ಡಿ. 30ಕ್ಕೆ 4 ವರ್ಷ ಕಳೆದು, 5ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಆದರೆ ಹೆಸರಿಗೆ ಯಾದಗಿರಿ ಜಿಲ್ಲೆಯಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆಯೇ ವಿನಃ ಅಭಿವೃದ್ಧಿ ಎನ್ನುವುದು ಇಲ್ಲಿ ಮರಿಚಿಕೆಯಾಗಿದೆ. ಜಿಲ್ಲಾ ಕೇಂದ್ರಕ್ಕೆ ಇರಬೇಕಾದ ಯಾವೊಂದು ಲಕ್ಷಣಗಳೂ ಇಲ್ಲಿ ಕಾಣುತ್ತಿಲ್ಲ.
ಅಂದಿನ ಮುಖ್ಯಮಂತ್ರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗುಲ್ಬರ್ಗದಲ್ಲಿ ನಡೆದ ವಿಧಾನಸಭೆ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ 30ನೇ ನೂತನ ಜಿಲ್ಲೆಯಾಗಿ ಘೋಷಿಸಿದರು. ಜಿಲ್ಲೆಯ ಅಭಿವೃದ್ಧಿಗಾಗಿ ಸುಮಾರು ರು. 300 ಕೋಟಿ ಪ್ಯಾಕೇಜ್ ಪ್ರಕಟಿಸಿ ಅನುದಾನ ಬಿಡುಗಡೆ ಭರವಸೆ ನೀಡಿ, ಇದರಲ್ಲಿ ಸುಮಾರು ರು. 70 ಕೋಟಿ ಬಿಡುಗಡೆ ಮಾಡಿದ್ದರು. ಆದರೆ ಬಿಡುಗಡೆಯಾದ ಹಣದಿಂದ ಅಭಿವೃದ್ಧಿಯಾದ ಕಾಮಗಾರಿಗಳು ಮಾತ್ರ ಶೂನ್ಯ.
ಯಾದಗಿರಿ ನೂತನ ಜಿಲ್ಲೆಯಾಗಿ ಘೋಷಣೆಯಾದ ನಂತರ ಇಲ್ಲಿಯ ಜನರು ಆಭಿವೃದ್ಧಿ ಕನಸುಗಳ ಜೊತೆಗೆ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂಬ ಕನಸುಗಳನ್ನಿಟ್ಟುಕೊಂಡಿದ್ದರು. ಆದರೆ ಸಮಸ್ಯೆಗಳಿರಲಿ, ತುರ್ತು ಅಗತ್ಯಗಳಿಗೇ ಸರ್ಕಾರ ಸ್ಪಂದಿಸದ ಕಾರಣ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿ ಕಾಣುತ್ತಿದೆ. ಯಾದಗಿರಿ, ಸುರಪುರ, ಶಹಾಪುರ ತಾಲೂಕುಗಳಗೊಂಡ ಚಿಕ್ಕ ಜಿಲ್ಲೆ ನೂರಾರು ಸಮಸ್ಯೆಗಳು ಎದುರಿಸುತ್ತಿದೆ .
ಹದಗೆಟ್ಟ ಗ್ರಾಮೀಣ ರಸ್ತೆಗಳು: ನಗರ ಹಾಗೂ ಗ್ರಾಮೀಣ ಪ್ರದೇಶದ ರಸ್ತೆಗಳು ಸಂಪೂಈ್ಗ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಸಂಚಕಾರ ಬಂದಿದೆ. ಸಾವಿರಾರು ಈ ರಸ್ತೆಗಳಲ್ಲಿ ಸಂಚಾರ ಮಾಡಬೇಕಾದರೆ ತಮ್ಮ ಪ್ರಾಣವನ್ನು ಅಂಗೈಯಲ್ಲಿ ಇಟ್ಟುಕೊಂಡು ಸಂಚಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಸಾಕಷ್ಟು ಅಪಘಾತಗಳು ಸಂಭವಿಸಿದರೂ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗದಿರುವುದು ಅವರ ಕಾರ್ಯ ವೈಖರಿ ತೋರಿಸುತ್ತದೆ.
ಪ್ರಭಾರಿಗಳದ್ದೇ ಕಾರುಬಾರು: ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಹಲವಾರು ಸರ್ಕಾರಿ ಕಚೇರಿಗಳಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಹುದ್ದೆಗಳು ಖಾಲಿಯಿದ್ದು, ಇಲ್ಲಿಯವರೆಗೂ ಭರ್ತಿಯಾಗಿಲ್ಲ.
ಇದರಿಂದಾಗಿ ಇಲ್ಲಿ ಪ್ರಭಾರಿ ಅಧಿಕಾರಿಗಳ ಕಾರುಬಾರು ಹೆಚ್ಚಾಗಿದೆ. ಇಲ್ಲಿನ ಹಲವಾರು ಅಧಿಕಾರಿಗಳು ಬೇರೆ ಜಿಲ್ಲೆಗಳಿಂದ ವಾರಕ್ಕೆ ಎರಡು ಭಾರಿ ಪ್ರಮುಖ ಕಚೇರಿಗಳಿಗೆ ಆಗಮಿಸುತ್ತಿರುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಜೊತೆಗೆ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ.
ಬಡವರಿಗಿಲ್ಲ ವೈದ್ಯಕೀಯ ಸವಲತ್ತು: ಜಿಲ್ಲೆಯಾದ ನಂತರ ಯಾದಗಿರಿ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಯಿತು. ಇಲ್ಲಿನ ಶಾಸಕರಾದ ಡಾ.ಎ.ಬಿ. ಮಾಲಕರಡ್ಡಿ ವೈದ್ಯರಾದವರು ಜಿಲ್ಲಾಸ್ಪತ್ರೆಗೆ ಹೊಂದಬೇಕಾದ ಯಾವ ಸೌಲಭ್ಯಗಳೂ ಇಲ್ಲಿ ಕಾಣಸಿಗುವುದಿಲ್ಲ. ಇದರಿಂದ ರೋಗಿಗಳು ಪರದಾಡುವಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಾಬೂರಾವ್ ಚಿಂಚನಸೂರ್ ಅವರ ತವರು ಕ್ಷೇತ್ರದಲ್ಲೇ ವೈದ್ಯರು ಇಲ್ಲದೆ, ಇಲ್ಲಿನ ಬಡ ರೋಗಿಗಳು ಪರದಾಡುತ್ತಿದ್ದಾರೆ. ಬಡ ರೋಗಿಗಳ ಮೂಕ ವೇದನೆ ಅಲಿಸುವವರೇ ಇಲ್ಲವಾಗಿದೆ. ಉಳಿದಂತೆ ಸುರಪುರ ಹಾಗೂ ಶಹಾಪುರಗಳ ಆಸ್ಪತ್ರೆಗಳ ಸ್ಥಿತಿಯೂ ಸಹ ಹೇಳಿಕೊಳ್ಳುವಂತಿಲ್ಲ.
ಗುಳೆ ಹೊರಟ ಜನತೆ: ಪ್ರತಿವರ್ಷ ಬರಗಾಲದಿಂದ ತತ್ತರಿಸುವ ಗಡಿ ಜಿಲ್ಲೆಯಲ್ಲಿ ಸಾವಿರಾರು ಕೂಲಿ ಕಾರ್ಮಿಕರು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಕುಟುಂಬ ಸಮೇತ ಬೆಂಗಳೂರು, ಹೈದ್ರಾಬಾದ್, ಮುಂಬೈಗಳಂತಹ ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ.
ಸರ್ಕಾರ ಕಡೇಚೂರ ಗ್ರಾಮದಲ್ಲಿ ಸರ್ಕಾರ ಕೈಗಾರಿಕೆ ಸ್ಥಾಪನೆಗೆ ಈಗಾಗಲೇ 3300 ಎಕರೆ ಜಮೀನು ಗುರ್ತಿಸಿದೆ. ಕೈಗಾರಿಕೆ ಸ್ಥಾಪನೆ ಮಾಡಿದರೆ ಮಾತ್ರ ಜನರು ಗುಳೆ ಹೋಗುವುದನ್ನು ತಪ್ಪಿಸಬಹುದು.
ರೈತರು ಕಂಗಾಲು: ಕಷ್ಟಪಟ್ಟು ಬೆಳೆದ ಭತ್ತ, ಶೇಂಗಾ, ತೊಗರಿ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ದೊರೆಯದೆ ರೈತ ಕಂಗಲಾಗಿದ್ದಾರೆ. ರೈತರ ಸಮಸ್ಯೆಗಳಿಗೆ ಸರಕಾರ ಮೊಸಳೆ ಕಣ್ಣೀರು ಹಾಕುತ್ತಿವೆ ಹೊರತು ಶಾಶ್ವತವಾಗಿ ಸಮಸ್ಯೆ ಬಗೆಹರಿಸುವ ಪ್ರಯತ್ನವಂತೂ ಮಾಡುತ್ತಿಲ್ಲ. ಜಿಲ್ಲೆಯಲ್ಲಿ 351 ಕೆರೆಗಳಿದ್ದು, ಸಕಾಲಕ್ಕೆ ಮಳೆ ಬಾರದೆ ಪರಿಣಾಮ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಹರಿಯುವ ಕೃಷ್ಣ ಹಾಗೂ ಭೀಮಾ ನದಿ ನೀರನ್ನು ಕೆರೆಗಳಿಗೆ ತುಂಬಿಸುವ ಯೋಜನೆ ಜಾರಿಗೆ ತಂದರೆ ಮಾತ್ರ ಈ ಭಾಗದಲ್ಲಿ ಹಸಿರು ಕ್ರಾಂತಿಯಾಗಿ ಜನತೆ ಸಂತಸದಿಂದ ಬಾಳುತ್ತಾರೆ.
ಗ್ರಾಮಗಳಲ್ಲಿ ವಿದ್ಯುತ್ ಪರಿವರ್ತಕಗಳು ದುರಸ್ತಿಗೆ ಬಂದರೆ ಜೆಸ್ಕಾಂ ಇಲಾಖೆ ಯಂತ್ರಗಳನ್ನು ನೀಡಲು ತಿಂಗಳು ಕಾಲ ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದ ಜನತೆ ಕತ್ತಲಲ್ಲಿ ಜೀವನ ಸಾಗಿಸಬೇಕಾಗಿದೆ. ಕುಡಿವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈ ಚಿಕ್ಕ ಜಿಲ್ಲೆಯತ್ತ ಹೆಚ್ಚಿನ ಗಮನ ಹರಿಸಿದರೆ ಚೊಕ್ಕವಾಗಿ ರೂಪುಗೊಳ್ಳುತ್ತದೆ ಎನ್ನುವುದು ಜನತೆಯ ಆಶಯವಾಗಿದೆ.