ಆಮ್ ಆದ್ಮಿ ಪಕ್ಷದತ್ತ ಬಿಆರ್ಪಿ ನೋಟ...!
ಆಳಂದ: ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನ ಮಾಡಲು ನಿರ್ಧರಿಸಿದ್ದಾರೆ. ಆದಾಗ್ಯೂ, ಜಿಲ್ಲೆಯ ಏಕೈಕ ಕೆಜೆಪಿ ಶಾಸಕ ಆಳಂದದ ಬಿ.ಆರ್. ಪಾಟೀಲ್ ಅವರು ಬಿಜೆಪಿಯನ್ನು ಸೇರದೇ ತಟಸ್ಥವಾಗಿ ಉಳಿಯಲು ನಿರ್ಧರಿಸಿದ್ದಾರೆ.
ವಿಚಾರ ಧಾರೆ: ರಾಂ ಮನೋಹರ್ ಲೋಹಿಯಾ ಹಾಗೂ ಜಯಪ್ರಕಾಶ್ ನಾರಾಯಣ್ ಅವರ ವಿಚಾರಧಾರೆಗಳಿಗೆ ಬದ್ಧವಾಗಿರುವ ಬಿ.ಆರ್. ಪಾಟೀಲ್ ಅವರು ಬಲವಂತದಿಂದಲೂ ಬಿಜೆಪಿಯನ್ನು ಸೇರಲಾರರು ಎಂಬುದು ಬೆಂಬಲಿಗರ ಅಭಿಪ್ರಾಯ.
ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನ ಮಾಡಿದ ಮೇಲೆ ಆ ಪಕ್ಷದ ಅಸ್ತಿತ್ವವೇ ಇಲ್ಲವಾಗುತ್ತದೆ. ಆದಾಗ್ಯೂ ಬಿಜೆಪಿಗೆ ಸೇರದೇ ತಟಸ್ಥ ನಿಲುವು ಹೊಂದಲು ಬಿ.ಆರ್. ಪಾಟೀಲ್ ಅವರು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಈ ಮಧ್ಯೆ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರದ ಚುಕ್ಕಾಣೆ ಹಿಡಿದಿದೆ. ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರಲ್ಲಿಯೂ ಸಹ ಸಾಕಷ್ಟು ಪ್ರಗತಿಪರ ವಿಚಾರಗಳಿದ್ದು, ಅವರೂ ಸಹ ತಾವು ಹಾಕಿಕೊಳ್ಳುವ ಗಾಂಧಿ ಟೋಪಿಯ ಮೇಲೆ ಆಮ್ ಆದ್ಮಿ ಎಂದು ಬರೆಸಿಕೊಂಡರೆ ಒಳ್ಳೆಯದು ಎಂದು ಅವರ ಕೆಲ ಹಿತೈಷಿಗಳು ಹೇಳುತ್ತಾರೆ.
ಸೆಳೆಯುವ ಯತ್ನ: ಆದಾಗ್ಯೂ, ಬಿ.ಆರ್. ಪಾಟೀಲ್ ಅವರನ್ನು ಹೇಗಾದರೂ ಮಾಡಿ ಬಿಜೆಪಿಗೆ ಸೇರಿಸಿಕೊಳ್ಳಲು ಇನ್ನೂ ಬಿ.ಎಸ್. ಯಡಿಯೂರಪ್ಪ ತಮ್ಮ ಯತ್ನವನ್ನು ಮುಂದುವರೆಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಬಿ.ಆರ್. ಪಾಟೀಲ್ ಅವರಿಗೆ ಬಿಜೆಪಿ ಟಿಕೇಟ್ ಕೊಡಿಸುವ ಪ್ರಯತ್ನಗಳೂ ಸಹ ಆರಂಭಗೊಂಡಿವೆ. ಆದರೂ, ಬಿ.ಆರ್. ಪಾಟೀಲ್ ಮಾತ್ರ ಯಾವುದೇ ನಿರ್ಧಾರ ಹೇಳದೇ ಇರುವುದು ಮಾತ್ರ ತೀವ್ರ ಕುತೂಹಲ ಹುಟ್ಟಿಸಿದೆ.
ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಬಿ.ಆರ್. ಪಾಟೀಲ್ ಅವರು ಈಗ ಕಾಂಗ್ರೆಸ್ ಸೇರುವ ಸ್ಥಿತಿಯಲ್ಲೂ ಇಲ್ಲ. ಅಲ್ಲದೇ ಬೇರೆ ಪಕ್ಷಗಳಲ್ಲಿ ಗುರ್ತಿಸಿಕೊಳ್ಳಲು ನಿರಾಸಕ್ತಿ ಹೊಂದಿದ್ದಾರೆ. ಈಗ ಬಿ.ಆರ್. ಪಾಟೀಲ್ ಅವರಿಗೆ ಬಿಜೆಪಿ ನರಿ ಆದರೆ, ಕಾಂಗ್ರೆಸ್ ಹುಲಿಯಾಗಿದೆ. ಎರಡರಿಂದಲೂ ರಕ್ಷಿಸಿಕೊಳ್ಳಲು ತಟಸ್ಥ ನೀತಿಯನ್ನು ಮುಂದುವರೆಸಲು ನಿರ್ಧರಿಸಿದ್ದಾರೆ.