ಯುರೋಪ್ ಅಧ್ಯಯನ ಯೋಗ
ಕ.ಪ್ರ. ವಾರ್ತೆ,ಗುಲ್ಬರ್ಗ,ಜ.2
ಶಿಕ್ಷಣೇತರ ವಿಚಾರಗಳಿಗಾಗಿಯೇ ಮಾಧ್ಯಮಗಳಲ್ಲಿ ಬಹು ಪ್ರಚಾರ ಪಡೆದಿದ್ದ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಇದೀಗ ಸುವರ್ಣ ಅವಕಾಶವೊಂದು ಒದಗಿ ಬಂದಿದೆ. ಎರಾಸ್ಮಸ್ ಮುಂಡಾಸ್ ಎಂಬ ಯೂರೋಪ್ ವಿವಿಗಳೊಂದಿಗೆ ಸಂಶೋಧನಾ ವಿದ್ಯಾರ್ಥಿ, ಬೋಧಕ ಸಿಬ್ಬಂದಿ ವಿನಿಮಯದ ಕಾರ್ಯಕ್ರಮವೊಂದು ಶೈಕ್ಷಣಿಕ ವಲಯದಲ್ಲಿ ಇದೀಗ ಸುದ್ದಿ ಮಾಡುತ್ತಿದೆ.
ಎರಾಸ್ಮಸ್ ಮುಂಡಾಸ್ ಎಂಬ ಸಂಶೋಧನಾ ವಿದ್ಯಾರ್ಥಿಗಳ ವಿನಿಮಯದ ಅತಿ ವಿಶಿಷ್ಟ ಯೋಜನೆಯನ್ನು ತನ್ನ ಮಡಿಲಿಗೆ ಹಾಕಿಕೊಂಡಿರುವ ರಾಜ್ಯದ ಏಕೈಕ ವಿವಿ ಜ್ಞಾನಗಂಗೆ. ಕುಲಪತಿ ಡಾ. ಪುಟ್ಟಯ್ಯ ಅಂತಾರಾಷ್ಟ್ರೀಯ ಶೈಕ್ಷಣಿಕ ವಲಯದಲ್ಲಿ ತಾವು ಹೊಂದಿರುವ ಸಂಪರ್ಕಗಳನ್ನೆಲ್ಲ ಬಳಸಿ ಇಲ್ಲಿನ ವಿದ್ಯಾರ್ಥಿ- ಅಧ್ಯಾಪಕರಿಗೆ ಈ ಕೊಡುಗೆ ನೀಡಿದ್ದಾರೆ.
ಎರಾಸ್ಮಸ್ ಮುಂಡಾಸ್ ಎಂಬುದು ಯೂರೋಪ್ ದೇಶದ ವಿವಿಗಳ ಒಕ್ಕೂಟದ ವಿನಿಮಯ ಯೋಜನೆ. ಇದರ ಖರ್ಚು-ವೆಚ್ಚಗಳನ್ನು ಸಂಪೂರ್ಣವಾಗಿ ಯೂರೋಪ್ ದೇಶಗಳೇ ಭರಿಸುತ್ತವೆ. ಈ ಯೋಜನೆಯಡಿಯಲ್ಲಿ 16 ಸಂಶೋಧನಾ ವಿದ್ಯಾರ್ಥಿಗಳಿಗೆ ವಿದೇಶ ಅಧ್ಯಯನ ಪ್ರವಾಸದ ಅವಕಾಶವೂ ದೊರೆಯಲಿದೆ.
16 ವಿವಿಗಳೊಂದಿಗೆ ಸಂಪರ್ಕ: ಯೂರೋಪ್ನ ಬೆಲ್ಜಿಯಂನಲ್ಲಿರುವ ಘೆಂಟ್ ವಿವಿ, ನೆದರ್ಲ್ಯಾಂಡ್ನ ಗ್ರೋನಿಗೆನ್ ವಿವಿ, ಫ್ರಾನ್ಸ್ನ ಮೊಂಟೆ ಪಿಲ್ಲರ್ ವಿಜ್ಞಾನ- ತಂತ್ರಜ್ಞಾನ ವಿವಿ, ಸ್ವೀಡನ್ನ ಸ್ಟಾಕ್ಹೋಮ್ನಲ್ಲಿರುವ ರಾಯಲ್ ತಂತ್ರಜ್ಞಾನ ಸಂಸ್ಥೆ, ಯುನೈಟೆಡ್ ಕಿಂಗಡಮ್ನಲ್ಲಿರುವ ಬೌರ್ನ್ಮೌಂಟ್ ವಿವಿ, ಜರ್ಮನಿಯ ಬೆರ್ಮನ್ ವಿವಿ ಸೇರಿದಂತೆ ಮುಂತಾದ 16 ಆಯ್ದ ವಿವಿಗಳೊಂದಿಗೆ ಸಂಶೋಧನೆ- ವಿದ್ಯಾರ್ಥಿಗಳ ವಿನಿಮಯ ಹಾಗೂ ಬೋಧನಾ ಸಿಬ್ಬಂದಿ ವಿನಿಯಮ, ಅಧ್ಯಯನ ಮುಂದಿನ 2 ವರ್ಷಗಳವರೆಗೆ ನಡೆಯಲಿದೆ.
ಏನಿದು ಎರಾಸ್ಮಸ್ ಮುಂಡಾಸ್?: ಎರಾಸ್ಮಸ್ ಮುಂಡಸ್ ಯೂರೋಪ್ ದೇಶದ ವಿವಿಗಳ ಒಕ್ಕೂಟ. ಯೂರೋಪಿಯನ್ ಕಮಿಷನ್ ಫ್ಯೂಜನ್ ಅಡಿಯಲ್ಲಿ ಈ ಯೋಜನೆ ರೂಪಿಸಲ್ಪಟ್ಟಿದೆ.
ಯೋಜನೆಯಡಿಯಲ್ಲಿ 2 ವರ್ಷಗಳ ಅವಧಿಗೆ 15 ಪಿಎಚ್ಡಿ, 10 ಪಿಡಿಎಫ್ (ಪೋಸ್ಟ್ ಡಾಕ್ಟರೇಟ್ ಫೆಲೋಶಿಪ್), 10 ಸಿಬ್ಬಂದಿ, 16 ವಿದ್ಯಾರ್ಥಿಗಳು ಕನಿಷ್ಠ 6 ತಿಂಗಳಿಂದ ಗರಿಷ್ಠ 2 ವರ್ಷಗಳವರೆಗೆ ವೈಜ್ಞಾನಿಕ, ಸಾಮಾಜಿಕ, ಸಾಂಸ್ಕೃತಿಕ ಜ್ಞಾನ ಸಂಪಾದಿಸಲು, ತಮ್ಮಲ್ಲಿರುವ ಇದೇ ರಂಗದ ಜ್ಞಾನ ವಿನಿಮಯಕ್ಕೆಂದು ಯೂರೋಪ್ನ 16 ವಿವಿಗಳಿಗೆ ಭೇಟಿ ನೀಡುವ ಅವಕಾಶವನ್ನು ಪಡೆಯಲಿದ್ದಾರೆ. ಜನವರಿ 1ರಿಂದಲೇ ಅನುಷ್ಠಾನಗೊಂಡಿರುವ ಈ ಯೋಜನೆಯಡಿಯಲ್ಲಿ ವಸ್ತು ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಯೊಬ್ಬ ಯೂರೋಪ್ ಪ್ರವಾಸ ಕೈಗೊಂಡಿದ್ದಾನೆ.
ವಿವಿಯಲ್ಲಿ ಹೇಳಿಕೊಳ್ಳುವಂಥ ವಿದೇಶಿ ಅಧ್ಯಯನ ವಿನಿಮಯ ಯೋಜನೆಗಳು ಪ್ರವೇಶ ಪಡೆದಿರಲಿಲ್ಲ. ಇದೀಗ ಈ ವಿವಿಗೆ ಇಂಥದ್ದೊಂದು ಅವಕಾಶ ದಕ್ಕಿರುವುದು ಇಲ್ಲಿನ ಶೈಕ್ಷಣಿಕ ವಲಯದಲ್ಲಿ ಸಂತಸ ತಂದಿದೆ.
ಸಂಪರ್ಕಿಸಿ...
ಗುಲ್ಬರ್ಗ ವಿವಿಯಲ್ಲಿ ಎರಾಸ್ಮಸ್ ಮುಂಡಾಸ್ ವಿನಿಮಯ ಯೋಜನೆಯ ನೋಡಲ್ ಅಧಿಕಾರಿಯನ್ನಾಗಿ ವಿಜ್ಞಾನ ನಿಕಾಯದ ಡೀನ್ ಡಾ. ಜಿಆರ್ ನಾಯಕ್ ನೇಮಕಗೊಂಡಿದ್ದಾರೆ. ಆಸಕ್ತರು ನೇರವಾಗಿ ಡಾ. ನಾಯಕರನ್ನು ಭೇಟಿ ಮಾಡಿ ಮಾಹಿತಿ ಪಡೆಯಬಹುದು. ಢಿಢಿಢಿ.ಡಢಛಛ್ಜಛಡಿಛ.್ಛ್ಡ ಅಥವಾ ಜ್ಡಿಡ್ಝ್ಟಟಿ-ಜಜ್ಡ.ಜಢಅಋ್ಖಖಐಕಃ ಜಾಲತಾಣಕ್ಕೆ ಭೇಟಿ ನೀಡಿ ಯೋಜನೆಯ ಮಾಹಿತಿ ಹೊಂದಬಹುದಾಗಿದೆ.
ಯುರೋಪ್ ಭೇಟಿಯ ಫಲಶೃತಿಯಾಗಿ ಎರಾಸ್ಮಸ್ ಮುಂಡಾಸ್ ಯೋಜನೆ ನಮ್ಮ ವಿವಿಗೆ ದೊರಕಿದೆ. ಶತಮಾನ ಕಂಡ ವಿವಿಗಳು ಇಲ್ಲಿದ್ದರೂ ಹಿಂದುಳಿದ ಪ್ರದೇಶದಲ್ಲಿರುವ ಹಾಗೂ ಜಾಣ ವಿದ್ಯಾರ್ಥಿಗಳೇ ಹೆಚ್ಚಾಗಿರುವ ಇಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅವಕಾಶಗಳ ಬಾಗಿಲು ತೆರೆಯಲು ಯತ್ನಿಸಿ ಯಶ ಕಂಡಿರುವೆ.
-ಡಾ. ಈ.ಟಿ. ಪುಟ್ಟಯ್ಯ, ಕುಲಪತಿ
ಗುಲ್ಬರ್ಗ ವಿಶ್ವವಿದ್ಯಾಲಯ