ಸುಲಫಲಶ್ರೀ ದ್ವಂದ್ವ ಧೋರಣೆ: ಆಂದೋಲಾಶ್ರೀ ಸಿಡಿಮಿಡಿ
ಗುಲ್ಬರ್ಗ: ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಘೋಳನೂರಲ್ಲಿ ಮಠ ಕಟ್ಟಿರುವ ಸುಲಫಲ ಶ್ರೀಗಳು ಮಠದ ಹೆಬ್ಬಾಲಿಗೆ ಕುಂಬಳಕಾಯಿ ನೇತು ಹಾಕಿದ್ದಾರೆ. ಜೇವರ್ಗಿಯಲ್ಲಿ ಕಳೆದ ವರ್ಷ ನಡೆದ ದಸರಾ ದರ್ಬಾರ್ಗೆ ಮೌಢವೆಂದು ವಿರೋಧಿಸಿದ್ದ ಇವರು ತಮ್ಮ ಮಠದ ಬಾಗಿಲಿಗೆ ಕುಂಬಳಕಾಯಿ ನೇತು ಹಾಕಿದ್ದು ಯಾವ ಪ್ರಗತಿಪರ ಧೋರಣೆ ಎಂದು ರಾಜ್ಯ ಶ್ರೀರಾಮ ಸೇನೆಯ ಮುಖಂಡರು, ಜೇವರ್ಗಿಯ ಆಂದೋಲಾದ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಹೇಳಿಕೆ ನೀಡಿರುವ ಅವರು ಘತ್ತರ್ಗಾ, ಗಾಣಗಾಪುರ ಭಕ್ತರಿಗೆ ಅನ್ನದಾಸೋಹಕ್ಕೂ ಅವಕಾಶ ಕಲ್ಪಿಸಲಾಗುತ್ತಿದೆ. ಪ್ರಗತಿಪರ ಧೋರಣೆ ಇರುವ ಸುಲಫಲ ಶ್ರೀಗಳಿಂದ ಇಂತಹ ಕೆಲಸ ಯಾಕೆ ಪಾದಯಾತ್ರೆಯೂ ಮೌಢ್ಯ. ಜೊತೆಗೇ ಘತ್ತರ್ಗಾ, ಗಾಣಗಾಪುರ ಅನ್ಯ ಸಂಪ್ರದಾಯದ ತೀರ್ಥಕ್ಷೇತ್ರಗಳು. ಅಲ್ಲಿನ ಭಕ್ತರಿಗೆ ಹೋಗಲು ಅವಕಾಶ ಕಲ್ಪಿಸಿ ಅನುಕೂಲ ಮಾಡಿಕೊಡುತ್ತಿರುವುದು ಸಹ ಅವರು ಹಿಂದೆ ಜೇವರ್ಗಿ ದಸರಾ ದರ್ಬಾರ್ ಸಂದರ್ಭದಲ್ಲಿ ತಳೆದ ನಿಲುವಿಗೆ ತೀರ ಭಿನ್ನ ಎಂದಿದ್ದಾರೆ.
ಸುಲಫಲ ಶ್ರೀಗಳ ಇಂತಹ ದ್ವಂದ್ವ ಧೋರಣೆ ಸ್ವಾಮೀಜಿಗಳ ಸಮಿತಿಗೆ ಬೇಸರ ತರಿಸಿದೆ. ನಾಡಿನ ಮಠಾಧೀಶರುಗಳ ಸಮುದಾಯ ಇಂತಹ ದ್ವಂದ್ವ ಧೋರಣೆಯ ಸ್ವಾಮೀಜಿಗಳಿಂದ ಸಮಾಜಕ್ಕೆ ಯಾವ ಕೊಡುಗೆ ನಿರೀಕ್ಷಿಸಲು ಸಾಧ್ಯ ಎಂದು ಆಂದೋಲಾ ಶ್ರೀಗಳು ಖಾರವಾಗಿ ಪ್ರಶ್ನಿಸಿದ್ದಾರೆ.