ಅಜೆಂಡಾದಲ್ಲಿ ದೋಷ; ಸಭೆಗೆ ಬಹಿಷ್ಕಾರ
ಯಾದಗಿರಿ: ಸಭೆಯ ನಡೆವಳಿಕೆಯಲ್ಲಿ ಅವಶ್ಯಕ ವಿಷಯಗಳಿಲ್ಲದೆ ದೋಷಪೂರಿತವಾಗಿದ್ದು, ನಿಯಮ ಬಾಹಿರವಾಗಿ ಸಭೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ನಗರಸಭೆಯ ಸಾಮಾನ್ಯ ಸಭೆ ಬಹಿಷ್ಕರಿಸಿ ಹೊರ ನಡೆದ ಘಟನೆ ನಡೆಯಿತು.
ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ಎಂ.ಡಿ. ಇಸಾಕ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ನ ಹಿರಿಯ ಸದಸ್ಯ ಬಸವರಾಜ ಜೈನ್ ಮಾತನಾಡಿ, ಇಂದಿನ ಸಭೆಯ ನಡೆವಳಿಕೆ ದೋಷಪೂರಿತವಾಗಿದೆ. ಅರ್ಥವಿಲ್ಲದ ವಾಕ್ಯ ರಚನೆ ಮಾಡಲಾಗಿದೆ. ಹಿಂದಿನ ಸಭೆಯ ನಡೆವಳಿಕೆಗಳಿಲ್ಲ ಹಾಗೂ ಲೆಕ್ಕಪತ್ರದ ಮಾಹಿತಿ ಇಲ್ಲ. ಒಟ್ಟಾರೆಯಾಗಿ ನಗರಸಭೆಯ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಸಭೆ ನಡೆಸಲಾಗುತ್ತಿದೆ ಎಂದು ದೂರಿದರು.
ಅಕ್ಟೋಬರ್ ತಿಂಗಳಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ನಗರಸಭೆ ಕಾಮಗಾರಿಗಳ ಬಗ್ಗೆ ಮುಂದಿನ ಸಭೆಯಲ್ಲಿ ಸಂಪೂರ್ಣ ಮಾಹಿತಿ ನೀಡುವಂತೆ ಕೇಳಿದ್ದೆ. ಆದರೂ ಸಭೆಯಲ್ಲಿ ಯಾವುದೇ ಮಾಹಿತಿ ನೀಡಿಲ್ಲ. ನೀವು ತಯಾರಿಸಿದ ಅಜೆಂಡಾ ಪ್ರತಿಯಲ್ಲಿ ಸಾಕಷ್ಟು ದೋಷಗಳಿವೆ. ಕಳೆದ ತಿಂಗಳ ಸಭೆಯ ಲೆಕ್ಕಪತ್ರ ಮಂಡಿಸಬೇಕು. ಲೆಕ್ಕಪತ್ರದ ಪೂರ್ಣ ಮಾಹಿತಿ ಪ್ರತ್ಯೇಕವಾಗಿ ಸದಸ್ಯರಿಗೆ ನೀಡಬೇಕು. ಆದರೆ ಇದ್ಯಾವುದು ಮಾಡದೇ ಸಭೆ ನಡೆಸಲಾಗುತ್ತಿದ್ದು, ಇದೊಂದು ಕಾನೂನು ಬಾಹಿರವಾದ ಸಭೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ ಸದಸ್ಯರಿಗೆ ಅಸ್ಪಷ್ಟ ಮಾಹಿತಿ ನೀಡಲಾಗಿದ್ದು, ಇದು ಸಭೆ ನಡೆಸುವ ಪದ್ಧತಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾಮಾನ್ಯ ಸಭೆಯ ನಡೆವಳಿಕೆಗಳಲ್ಲಿ ಸಾಕಷ್ಟು ತಪ್ಪುಗಳಿವೆ. ಆದ್ದರಿಂದ ಸಭೆ ಮುಂದೂಡಿ, ನಂತರ ಒಂದು ವಾರದೊಳಗೆ ತಪ್ಪುಗಳನ್ನು ಸರಿಪಡಿಸಿ ಸಾಮಾನ್ಯ ಸಭೆ ಕರೆಯಿರಿ ಎಂದು ಸಲಹೆ ನೀಡಿದರು.
ಇದಕ್ಕೆ ನಗರಸಭೆ ಅಧ್ಯಕ್ಷರು ಹಾಗೂ ನಗರಸಭೆ ಅಧಿಕಾರಿಗಳು ಮೌನ ವಹಿಸಿದಾಗ, ಆಕ್ರೋಶಗೊಂಡ ಅವರು ಕಾನೂನು ಬಾಹಿರವಾದ ಸಭೆ ನಡೆಸಲು ಒಪ್ಪಿಗೆ ಸೂಚಿಸುವುದಿಲ್ಲ, ನಾವು ಸಭೆ ಬಹಿಷ್ಕರಿಸುತ್ತೇವೆ ಎಂದು ಹೇಳಿ ಶಿವಕುಮಾರ ದೊಡ್ಮನಿ, ಸ್ಯಾಮಸನ್ ಮ್ಯಾಳಿಕೇರಿ, ಶಶಿಧರ ರೆಡ್ಡಿ ಸೇರಿದಂತೆ ತಮ್ಮ ಸದಸ್ಯರೊಂದಿಗೆ ಹೊರ ನಡೆದರು.