ಚರಂಡಿ ಚಾವಣಿ ಕುಸಿತ; ವಾಹನ ಸವಾರರಲ್ಲಿ ಆತಂಕ
ಯಾದಗಿರಿ: ನಗರದ ಹತ್ತಿಕುಣಿ ಕ್ರಾಸ್ನಿಂದ ತರಕಾರಿ ಮಾರುಕಟ್ಟೆಗೆ ಹೋಗುವ ರಸ್ತೆಯ ಇರುವ ಚರಂಡಿ ಛಾವಣಿ ಕುಸಿದಿರುವುದು ವಾಹನ ಸಂಚಾರರಿಗೆ ಹಾಗೂ ಜನರಿಗೆ ತೀವ್ರ ತೊಂದರೆಯಾಗಿದೆ. ನಗರದ ತರಕಾರಿ ಮಾರುಕಟ್ಟೆಗೆ ಸಮೀಪದ ಬಂದಳ್ಳಿ, ಚಾಮನಳ್ಳಿ, ಯಡ್ಡಳ್ಳಿ ಹಾಗೂ ಹತ್ತಕುಣಿ ಗ್ರಾಮದಿಂದ ಜನತೆ ತಾವೂ ಬೆಳೆದ ತರಕಾರಿಯನ್ನು ಟಂಟಂಗಳಲ್ಲಿ ತೆಗೆದುಕೊಂಡು ದಿನಾಲು ಬೆಳಿಗ್ಗೆ ನಗರಕ್ಕೆ ಆಗಮಿಸುತ್ತಾರೆ. ಯಾವಾಗಲೂ ಜನದಟ್ಟಣೆಯಿಂದ ಕೂಡಿದ ಮಾರುಕಟ್ಟೆಗೆ ತೆರಳುವ ಪ್ರಮುಖ ಮಾರ್ಗದ ಮಧ್ಯೆ ಇರುವ ಚರಂಡಿ ಮೇಲೆ ಬೃಹತ್ ಗುಂಡೆ ಬಿದ್ದಿರುವುದರಿಂದ ವಾಹನ ಸಂಚಾರ ಮಾಡಲು ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ಸಮಯದಲ್ಲಿ ಅನೇಕ ಅಪಘಾತಗಳು ಕೂಡ ಸಂಭವಿಸಿವೆ. ಕಳೆದ ಒಂದು ತಿಂಗಳ ಹಿಂದೆಯೇ ಚರಂಡಿ ಕುಸಿದಿದ್ದರೂ, ನಗರಸಭೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ತೀವ್ರ ಅನಾಹುತ ಸಂಭವಿಸುವ ಮುನ್ನವೇ ಸಂಬಂಧಪಟ್ಟವರು ಕ್ರಮ ಕೈಗೊಳ್ಳುವರೇ ಎನ್ನುವುದು ಪ್ರಶ್ನೆಯಾಗಿದೆ.