ಧಾರ್ಮಿಕ ಆಚರಣೆಯಿಂದ ಶಾಂತಿ, ನೆಮ್ಮದಿ: ಗುತ್ತೇದಾರ
ಸುರಪುರ: ನಮ್ಮ ಜಾತಿ ಧರ್ಮ ಬೇರೆಯಾಗಿರಬಹುದು. ಆದರೆ ನಾಮ ಹಲವು, ದೇವನೊಬ್ಬ. ಆಚರಣೆಯಲ್ಲಿನ ವಿಧಾನ ಬೇರೆಯಾಗಿದ್ದರು ಅಂತಿಮ ಗುರಿ ಮಾತ್ರ ಒಂದೇ ಆಗಿದೆ. ಧಾರ್ಮಿಕ ಕಾರ್ಯಕ್ರಮಗಳು ಒತ್ತಡದ ಜೀವನಕ್ಕೆ ಶಾಂತಿ, ನೆಮ್ಮದಿ ನೀಡುತ್ತವೆ ಎಂದು ಜ್ಯೋತಿ ಸ್ವರೂಪ ಅಯ್ಯಪ್ಪ ಸ್ವಾಮಿ ಟ್ರಸ್ಟ್ ಅಧ್ಯಕ್ಷ ಪಾರಪ್ಪ ಗುತ್ತೇದಾರ್ ಹೇಳಿದರು.
ಪಟ್ಟಣದ ಬಡಿಗೇರ್ ಬಾವಿ ಹತ್ತಿರದ ಕಾಳಿಕಾ ದೇವಿ ದೇವಸ್ಥಾನದ ಆವರಣದಲ್ಲಿ ಗುರುವಾರ ರಾತ್ರಿ ಜರುಗಿದ ಅಯ್ಯಪ್ಪ ಸ್ವಾಮಿಯ 16ನೇ ವರ್ಷದ ಮಹಾಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯ ಧರ್ಮದ ತಿರುಳು ಅರಿತು ನಡೆದರೆ ಸಮಾಜ, ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ. ಈ ನಿಟ್ಟಿನಲ್ಲಿ ಶಾಂತಿಧಾಮವನ್ನಾಗಿ ಮಾಡುವ ಉದ್ದೇಶದಿಂದ ಇಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ನಿರ್ಮಿಸಲಾಗುತ್ತಿದೆ. ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಗುರುಸ್ವಾಮಿ ಪದ್ಮನಾಭ ಉಡುಪಿ ಮಹಾಪೂಜೆ ನೆರವೇರಿಸಿದರು. ನಂತರ ಭಕ್ತರಿಗೆ ಪ್ರಸಾದ ವಿತರಣೆ ಜರುಗಿತು. ಟ್ರಸ್ಟ್ನ ಉಪಾಧ್ಯಕ್ಷ ವಿಷ್ಣು ಗುತ್ತೇದಾರ್, ಪ್ರಮುಖರಾದ ರಾಕೇಶ ಹಂಚಾಟೆ, ಉದಯ ಕುಮಾರ, ವಿರುಪಾಕ್ಷಿ ಕೋನಾಳ, ನಾಗೇಶ ಕಾಟಗಿ, ಮಂಜುನಾಥ ಬೈರಿಮಡ್ಡಿ, ರಾಘವೇಂದ್ರ ಚವಲಕರ್, ಪ್ರಹ್ಲಾದ ಕಟ್ಟಿಮನಿ, ರಾಘವೇಂದ್ರ ಪೊಲೀಸ್ ಸೇರಿದಂತೆ ಅಯ್ಯಪ್ಪ ಸ್ವಾಮಿ ಮಾಲೆಧಾರಿಗಳು ಇದ್ದರು.