ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶೀಘ್ರವೇ ಗ್ರಾಪಂ ನೌಕರರ ವೇತನ ಕೊಡಿ

Rashmi Kasaragodu
Updated On : 4 Jan 2014, 12:03 pm

ಸುರಪುರ: ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ತಾಲೂಕಿನ 42 ಗ್ರಾಮ ಪಂಚಾಯ್ತಿಯ ನೌಕರರಿಗೆ ತಕ್ಷಣ ವೇತನ ನೀಡುವಂತೆ ಗ್ರಾಪಂ ನೌಕರರ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಆಗ್ರಹಿಸಿದರು.
  ಪಟ್ಟಣದ ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪದಲ್ಲಿ ಸಿಐಟಿಯು ನೇತೃತ್ವದಲ್ಲಿ ಶುಕ್ರವಾರ ಜರುಗಿದ ಗ್ರಾಪಂ ನೌಕರರ ತಾಲೂಕು ಮಟ್ಟದ ಸಮ್ಮೇಳನದಲ್ಲಿ ಮಾತನಾಡಿ, ಗ್ರಾಪಂ ನೌಕರರಿಗೆ ಪ್ರತಿ ತಿಂಗಳು ವೇತನ ನೀಡುವಂತೆ ಸರ್ಕಾರದ ನಿರ್ದೇಶನವಿದ್ದರೂ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿ ನೌಕರರಿಗೆ ವೇತನ ಪಾವತಿಸುತ್ತಿಲ್ಲ. ಹೀಗಾಗಿ ಪಂಚಾಯ್ತಿ ನೌಕರರು ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
  ಗ್ರಾಪಂ.ಗಳಲ್ಲಿ ಅಲ್ಲಿಯ ನೌಕರರಿಗೆ ಸರಿಯಾಗಿ ಪ್ರತಿ ತಿಂಗಳು ವೇತನ ನೀಡದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಜಿಪಂ ಸಿಇಒಗೆ ದೂರು ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದರು.
  ರಾಜ್ಯದ ಎಲ್ಲಾ ಗ್ರಾಪಂ.ಗಳಲ್ಲಿ ಕಸ ಗುಡಿಸುವ ಸಿಬ್ಬಂದಿ ಆರೋಗ್ಯ ರಕ್ಷಣೆ ಸಲಕರಣೆಗಳನ್ನು ನೀಡಬೇಕು. ಹೆರಿಗೆ ಭತ್ಯೆ, ಎಪ್ರಿಲ್ನಲ್ಲಿ ಮಂಜೂರಾದ ವೇತನ ಹೆಚ್ಚಳ ಆದೇಶ ಜಾರಿ ಮಾಡಬೇಕು. ಈ ಬಾರಿಯ ಬಜೆಟ್ನಲ್ಲಿ ಪಂಚಾಯ್ತಿ ನೌಕರರ ವೇತನಕ್ಕೆ ಅನುದಾನ ಮೀಸಲಿಟ್ಟು, ಸೇವಾ ಭದ್ರತೆ ಒದಗಿಸಬೇಕು ಎಂಬ ನಾನಾ ಬೇಡಿಕೆಗಳಿಗೆ ಒತ್ತಾಯಿಸಿ 23ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾನ್ಪಡೆ ತಿಳಿಸಿದರು.
  ಭದ್ರೆಪ್ಪ ಬಂಟನೂರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗನಗೌಡ, ತಾಲೂಕು ಅಧ್ಯಕ್ಷ ನಿಂಗಪ್ಪ ವಂಟೂರ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜಯಲಾಲ ತೋಟದಮನಿ, ಪ್ರಮುಖರಾದ ರಾಜು ಪವಾರ, ಸುರೇಖಾ ಕುಲಕರ್ಣಿ, ಯಲ್ಲಪ್ಪ ಚಿನ್ನಾಕರ್, ದೇವಿಂದ್ರಪ್ಪ ಪತ್ತಾರ, ಶ್ರೀದೇವಿ ಕೂಡಲಗಿ, ಬಸ್ಸಮ್ಮ ಆಲ್ಹಾಳ ವೇದಿಕೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement