ಸಿಬ್ಬಂದಿ ಕೊರತೆ; ಜನರ ಪೀಕಲಾಟ
ಎನ್.ಕುಮಾರಸ್ವಾಮಿ ಕಲಾಲ್
ಕನ್ನಡಪ್ರಭ ವಾರ್ತೆ ಗುರುಮಠಕಲ್ ಜ.3
ಯಾದಗಿರಿ ಜಿಲ್ಲಾ ಕೇಂದ್ರವಾಗಿ ಇಲ್ಲಿಗೆ 4 ವರ್ಷ ಸಂಪೂರ್ಣ ಪೂರೈಸಿದರೂ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಕೊರತೆಯಿಂದ ಜನತೆ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ನೂತನ ಜಿಲ್ಲೆಯಾಗಿ ಸರ್ಕಾರವು ಅಧಿಕೃತವಾಗಿ ಘೋಷಿಸಿದರೆ ಇಲ್ಲಿಯ ಜನತೆ ಅಭಿವೃದ್ಧಿ ಜೊತೆಗೆ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದು ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು. ಆದರೆ ಇಲ್ಲಿಗೆ ಮಂಜೂರಾತಿಯಾದ ಎ ದರ್ಜೆಯ 102, ಬಿ ದರ್ಜೆ 169, ಸಿ ದರ್ಜೆ 1,200 ಹಾಗೂ ಡಿ ದರ್ಜೆಯ 719, ಒಟ್ಟು 2 ಸಾವಿರ ಸಿಬ್ಬಂದಿಯನ್ನು ನೇಮಕ ಮಾಡುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ಪ್ರದರ್ಶಿಸಿದ್ದಕ್ಕೆ ಜನತೆ ಇಟ್ಟುಕೊಂಡಿದ್ದ ನೂರಾರು ಕನಸುಗಳು ನೂಚ್ಚು ನೂರಾಗಿವೆ.
ಗಮನವೇ ಹರಿಸುತ್ತಿಲ್ಲ: ರಾಜ್ಯದ ಪ್ರತಿಯೊಂದು ಜಿಲ್ಲೆಗೆ ಸರ್ಕಾರವು ಪ್ರಮುಖ್ಯತೆಯನ್ನು ನೀಡಿ ಜಿಲ್ಲೆಗೆ ಬೇಕಾದ ಎಲ್ಲ ರೀತಿಯ ಸವಲತ್ತುಗಳನ್ನು ನೀಡುತ್ತ ಬರುತ್ತಲಿದೆ. ಅದರೆ ಯಾದಗಿರಿ ಜಿಲ್ಲೆಯ ವಿಷಯಕ್ಕೆ ಬಂದರೆ ಅದಕ್ಕೆ ವಿರುದ್ಧವಾಗಿಯೇ ಇದೆ. ಕಳೆದ 4 ವರ್ಷಗಳ ಹಿಂದೆಯೇ ಮಂಜೂರಾದಂತಹ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ನೇಮಕ ಮಾಡುವ ಬಗ್ಗೆ ಗಮನವೇ ಹರಿಸುತ್ತಿಲ್ಲ.
2,000 ಹುದ್ದೆಗಳು ಖಾಲಿ: ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಅದರ ಅಧೀನದಲ್ಲಿ ಬರುವ ಕಾರ್ಯಾಲಯಗಳಲ್ಲಿ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಬಹುಮುಖ್ಯವಾಗಿ ಪೋಲಿಸ್ ಇಲಾಖೆ ಸೇರಿದಂತೆ ಜಿಲ್ಲಾ ಆರೊಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ಇತರೆ ಇಲಾಖೆಯಲ್ಲಿ ಮೇಲಾಧಿಕಾರಿಗಳಿಂದ ಹಿಡಿದು ಡಿ ಗ್ರೂಪ್ ನೌಕರರವೆರೆಗೆ ಎಲ್ಲಾ ಹುದ್ದೆಗಳು ಖಾಲಿಯಾಗಿದ್ದು, ಜನತೆ ತಮ್ಮ ಕೆಲಸ ಕಾರ್ಯಗಳಿಗಾಗಿ ಪರದಾಡುವಂತೆ ಆಗಿದೆ.
ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಖಾಲಿ ಹುದ್ದೆ?: ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆಯ ವಿಭಾಗದಲ್ಲಿ ಒಟ್ಟು 72 ವಿವಿಧ ಹುದ್ದೆಗಳು ಖಾಲಿ ಇವೆ. ಜಿಲ್ಲಾ ಪಂಚಾಯ್ತಿಯಲ್ಲಿ 47, ಶಿಕ್ಷಣ ಇಲಾಖೆಯಲ್ಲಿ 119, ಹಾಗೂ ಆರೋಗ್ಯ ಇಲಾಖೆಯಲ್ಲಿ 605, ಪೋಲಿಸ್ ಇಲಾಖೆಯಲ್ಲಿ ಒಟ್ಟು 292, ಹೀಗಾಗಿ ಒಟ್ಟಾರೆ ಸುಮಾರು 2000ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು ಸಿಬ್ಬಂದಿ ಕೊರತೆಯಿದೆ.
ಜಿಲ್ಲೆಯ ಸುರಪುರ, ಶಹಾಪುರ, ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ತಾಲೂಕು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳು ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿಯಿಲ್ಲದೆ ಆಸ್ಪತ್ರೆಗಳಲ್ಲಿ ನರ್ಸ್ಗಳೇ ವೈದ್ಯರ ಕೆಲಸ ಮಾಡುತ್ತಿದ್ದಾರೆ. ಕೆಲವು ಆಸ್ಪತ್ರೆಗಳಲ್ಲಿ ವೈದ್ಯರೇ ಎಲ್ಲ ಕೆಲಸ ಕಾರ್ಯಗಳನ್ನು ಮಾಡುವಂತಹ ಶೋಚನೀಯ ಸ್ಥಿತಿ ಎದುರಾಗಿದೆ.
ಶಿಕ್ಷಕರ ಕೊರತೆ: ಗ್ರಾಮೀಣ ಭಾಗದಲ್ಲಿ ಶಿಕ್ಷಕರ ಕೊರತೆಯೂ ಇದೆ. ನಗರ ಪ್ರದೇಶಗಳನ್ನು ಹೊರತುಪಡಿಸಿದ್ದಾರೆ. ಜಿಲ್ಲೆಯ ಮೂರು ತಾಲೂಕು ಕೇಂದ್ರಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಿ ಶೈಕ್ಷಣಿಕವಾಗಿ ಜಿಲ್ಲೆ ಹಿಂದೆ ಉಳಿಯಲು ಕಾರಣವಾಗಿದೆ. ಒಟ್ಟಾರೆ ಯಾದಗಿರಿ, ಸುರಪುರ, ಶಹಾಪುರ ಮೂರು ತಾಲೂಕು ಕೇಂದ್ರಗಳನ್ನು ಚಿಕ್ಕ ಜಿಲ್ಲೆಯೂ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ರಾಜ್ಯದ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಜಿಲ್ಲೆಯ ಅಭಿವೃದ್ಧಿಗೆ ಗಮನ ಹರಿಸಬೇಕಿದೆ ಎನ್ನುವುದು ಇಲ್ಲಿನ ಜನತೆಯ ಒತ್ತಾಸೆ.