ಅಂಧರ ಕಲ್ಯಾಣಕ್ಕೆ ಸ್ಪಂದನ
ಗುಲ್ಬರ್ಗ: ಇಲ್ಲಿನ 15 ಅಂಧ ನಿರುದ್ಯೋಗಿಗಳು ಸೇರಿಕೊಂಡು ಹುಟ್ಟುಹಾಕಿರುವ ಸಂಘವೇ ಸ್ಪಂದನ ಕ್ಷೇಮಾಭಿವೃದ್ಧಿ ಸಂಸ್ಥೆ. 2013 ಮೇ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಂಘದಡಿಯಲ್ಲಿ ಅಂಧ ನಿರುದ್ಯೋಗಿಗಳ ಸ್ವಾವಲಂಬನೆ ವಿಚಾರದಲ್ಲಿ ಹೆಚ್ಚಿನ ಮಹತ್ವ ನೀಡುತ್ತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಾಮಾಜಿಕವಾಗಿ ಹೆಚ್ಚು ಪ್ರಯೋಜನಕ್ಕೆ ಬರುವಂತಹ ಉತ್ಪಾದಕ ಘಟಕಗಳನ್ನು ಸ್ಥಾಪಿಸುವುದು, ಅಂಧ ಮಕ್ಕಳಿಗಾಗಿ ವಸತಿ ನಿಲಯ ಸ್ಥಾಪನೆ, ಸಂಗೀತ ಶಾಲೆ ಶುರು ಮಾಡುವ ಗುರಿಯೊಂದಿಗೆ ಸ್ಪಂದನ ಕೆಲಸಕ್ಕೆ ಮುಂದಾಗಿದೆ. ಸದ್ಯಕ್ಕೆ ಇಲ್ಲಿ ಕುರ್ಚಿ ಹೆಣೆಯುವ ತರಬೇತಿ ನೀಡಲಾಗುತ್ತಿದೆ. ಇದರಿಂದಲೇ ಬರುವ ಆದಾಯದಿಂದ ಸ್ಪಂದನ ಸಂಘದ ಖರ್ಚು-ವೆಚ್ಚ ಸರಿದೂಗಿಸಿಕೊಂಡು ಹೋಗಲಾಗುತ್ತಿದೆ ಎಂದು ಕಾರ್ಯದರ್ಶಿ ಶರಣಪ್ಪ ಬಿರಾದಾರ ಹೇಳುತ್ತಾರೆ. ಬರುವ ದಿನಗಳಲ್ಲಿ ಸಂಘಟನೆ ಹೆಚ್ಚು ಕ್ರಿಯಾಶೀಲವಾಗಿ ಬೆಳೆಯುವ ಹಾಗೆ ಕ್ರಮ ಜರುಗಿಸುವುದೇ ತಮ್ಮೆಲ್ಲ ಗೆಳೆಯರ ಕನಸು ಎನ್ನುತ್ತಾರೆ ಬಿರಾದಾರ. ಸ್ಪಂದನ ಸಂಘಟನೆಯ ವಿವಿಧ ಪದಾಧಿಕಾರಿಗಳಾದ ಶ್ಯಾಮರಾವ್, ಬಸವರಾಜ ಧರಿ, ಲೋಕನಾಥ, ರಾಜಶೇಖರ, ಶರಣಬಸವಪ್ಪ, ರೇವಣಸಿದ್ದಪ್ಪ ಕಡಗಂಚಿ ಮುಂತಾದವರು ಸಹ ಜಿಲ್ಲೆಯ ಅಂಧರ ಕ್ಷೇಮಾಭಿವೃದ್ಧಿಗೆ ಸಂಘಟನೆ ತನ್ನದೇ ಆದಂತಹ ಕೆಲಸ ಕಾರ್ಯಗಳೊಂದಿಗೆ ಸಿದ್ಧವಾಗಿದೆ ಎಂದರು.