ಆರೋಗ್ಯಕರ ಸಮಾಜ ಪ್ರತಿಯೊಬ್ಬರ ಜವಾಬ್ದಾರಿ: ಸೇಡಂ
ಯಾದಗಿರಿ: ಸ್ಪರ್ಧಾತ್ಮಕ ಯುಗದಲ್ಲಿ ರಾಷ್ಟ್ರ ಗಣನೀಯ ಪ್ರಮಾಣದಲ್ಲಿ ಪ್ರಗತಿ ಸಾಧಿಸಿದರೂ ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದೆ. ಕಾರಣ ಆರೋಗ್ಯ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ವಿಕಾಸ ಅಕಾಡೆಮಿ ಅಧ್ಯಕ್ಷ ಹಾಗೂ ಸಂಸದರ ಬಸವರಾಜ ಪಾಟೀಲ್ ಸೇಡಂ ಹೇಳಿದರು.
ತಾಲೂಕಿನ ಸಂಗವಾರ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿ ನಿರ್ಮಾಣ ಮಾಡಿರುವ ಶೌಚಾಲಯಗಳನ್ನು ವೀಕ್ಷಿಸಿ ನಂತರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿ, ಈ ಗ್ರಾಮದಲ್ಲಿರುವ 153 ಕುಟುಂಬ ಸದಸ್ಯರು ಪ್ರತಿಯೊಂದು ಮನೆಗೆ ಶೌಚಾಲಯ ನಿರ್ಮಿಸಿಕೊಂಡು ಬಯಲು ಮುಕ್ತ ಶೌಚಾಲಯ ಗ್ರಾಮವಾಗುವ ಮೂಲಕ ಜಿಲ್ಲೆಯಲ್ಲಿ ಮಾದರಿ ಗ್ರಾಮವಾಗಿದೆ ಎಂದರು.
ಜಿಲ್ಲೆಯಲ್ಲಿ ವಿಕಾಸ ಅಕಾಡೆಮಿ ವತಿಯಿಂದ ಹೈ.ಕ. ಭಾಗದ ಹಲವಾರು ಗ್ರಾಮಗಳಲ್ಲಿ ಸುಮಾರು 10ಸಾವಿರ ಶೌಚಾಲಯ ನಿರ್ಮಾಣ ಮಾಡಿಕೊಂಡಿರುವ ಪ್ರತಿಯೊಂದು ಕುಟುಂಬಕ್ಕೂ ತಲಾ 8 ಸಾವಿರ ಪ್ರೋತ್ಸಾಹವಾಗಿ ನೀಡುವ ಮೂಲಕ ಜನರಲ್ಲಿ ಶೌಚಾಲಯದ ಅಗತ್ಯ ವಿವರಿಸಿ ನಿರ್ಮಾಣ ಮಾಡಿಕೊಳ್ಳಲು ಸ್ಫೂರ್ತಿ ನೀಡಿದೆ ಎಂದರು.
ಭಾರತ ವಿಕಾಸ ಅಕಾಡೆಮಿ ಬರುವ ದಿನಗಳಲ್ಲಿ ಆಯಾ ಜಿಲ್ಲೆಯ ಸ್ಥಳೀಯರ ಸಹಾಯ ಸಹಕಾರದಿಂದ 50 ಕೇಂದ್ರಗಳನ್ನು ಆರಂಭಿಸಿ ಗ್ರಾಮೀಣ ಪ್ರದೇಶದಲ್ಲಿರುವ ವಿದ್ಯಾವಂತ ಯುವಕರಿಗೆ ತಾಂತ್ರಿಕ ಕೌಶಲ್ಯ ತರಬೇತಿ ನೀಡಲಾಗುವುದು ಎಂದರು.
ಸಂಚಾಲಕ ನೀಲಕಂಠರಾಯ ಎಲ್ಹೇರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಕಲ್ಬುರ್ಗ ಕಂಪು ಕಾರ್ಯಕ್ರಮದ ನಂತರ ವಿಕಾಸ ಅಕಾಡೆಮಿ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿಗೆ ಹಲವಾರು ಯೋಜನೆಗಳ ಮೂಲಕ ಶ್ರಮಿಸಿದ್ದೇವೆ ಎಂದರು. ಶಾಂತರೆಡ್ಡಿ ವನಿಕೇರಿ, ಮಲ್ಲಿಕಾರ್ಜುನ ಸಂಗವಾರ, ಪಾರ್ವತಮ್ಮ ದಂತೆ ಇತರರಿದ್ದರು.