ಉತ್ತಮ ಸಮಾಜಕ್ಕೆ ಶಿಕ್ಷಕರ ಪಾತ್ರ ಮುಖ್ಯ
ಗುರುಮಠಕಲ್: ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಪ್ರಯತ್ನದೊಂದಿಗೆ ಮಕ್ಕಳಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿಸುವುದಲ್ಲದೇ ಉತ್ತಮ ಸಮಾಜವನ್ನು ನಿರ್ಮಿಸಲು ಶಿಕ್ಷಕರ ಪಾತ್ರ ಮುಖ್ಯ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಮಾರುತಿ ಹುಜರತಿ ಅಭಿಪ್ರಾಯ ಪಟ್ಟರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಜನವಾಡ ಆವರಣದಲ್ಲಿ ಸೇವೆಯಿಂದ ನಿವೃತ್ತಿಗೊಂಡ ಸಾಯಪ್ಪ ದಾಸರಿ ಶಿಕ್ಷಕರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಸೇವೆ ಶ್ಲಾಘನೀಯ: ಹಿರಿಯ ಶಿಕ್ಷಕ ಸಾಯಪ್ಪನವರು ತನ್ನ ವೃತ್ತಿಯನ್ನು ಅತ್ಯಂತ ನಿಷ್ಠೆಯಿಂದ ಪ್ರಾಮಾಣಿಕ ಸೇವೆಯನ್ನು ನಿರ್ವಹಿಸುತ್ತ ಬಂದಿರುವುದು ಸಂತಸ ವಿಚಾರ. ತಮ್ಮ 35 ವರ್ಷಗಳ ಸೇವಾ ಅವಧಿಯಲ್ಲಿ ಶಿಕ್ಷಕರಿಗೆ ಉತ್ತಮ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸಿದ್ದು ಶ್ಲಾಘನೀಯ ಎಂದರು.
ವೃತ್ತಿಯನ್ನು ಪ್ರೀತಿಸಿದರು: ಸ್ನೇಹ ಗಂಗಾ ಪತ್ರಿಕೆಯ ಸಂಪಾದಕರಾದ ಸಿ.ಎಂ. ಪಟ್ಟೇದಾರ ಮಾತನಾಡಿ, ಸಾಯಪ್ಪ ಶಿಕ್ಷಕರು ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿ, ಇವರು ತಮ್ಮ ಜೀವನದಲ್ಲಿ ವೃತ್ತಿಯನ್ನು ಅತೀ ಪ್ರೀತಿಸುತ್ತಿದ್ದರು ಎಂದರು.
ಶಿಕ್ಷಣ ಸಂಯೋಜಕ ದೇವಿಂದ್ರಪ್ಪ, ನಾಗರೆಡ್ಡಿ ಐಇಆರ್ಟಿ, ಚಪೆಟ್ಲಾ ಪ್ರೌಢಶಾಲೆ ಮು.ಗು ಹಣಮಂತು ಹಂದರಕಿಯವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಶಾಲಾ ಮುಖ್ಯಗುರು ಬಿ.ಬಿ. ಗೌಡರ್ ಅಧ್ಯಕ್ಷತೆ, ವೆಂಕಟರೆಡ್ಡಿ ಬಿಆರ್ಪಿ, ಸಿಆರ್ಪಿಗಳಾದ ನಾರಾಯಣರೆಡ್ಡಿ ಪಾಟೀಲ, ಸೈಯದ್, ಆಶಪ್ಪ, ರಾಮುಲು, ಜಿಲ್ಲಾ ಸ.ನೌ.ಸಂ. ಸದಸ್ಯ ಪಾಂಡುರಂಗ ಮೇದ, ಪಪಂ ಮಾಜಿ ಅಧ್ಯಕ್ಷ ಭೀಮಶಪ್ಪ ಗೂಡ್ಸೆ, ಎಸ್ಡಿಎಮ್ಸಿ ಅಧ್ಯಕ್ಷ ಮಾಣಿಕಪ್ಪ ಜೋಗು, ಉಪನ್ಯಾಸಕರಾದ ಮಲ್ಲಿಕಾರ್ಜುನ ಹೊಸಮನಿ, ಅಖಂಡೇಶ್ವರಯ್ಯ ಹಿರೇಮಠ, ಹಿಮಾಲಪುರ ಸ.ಹಿ.ಪ್ರಾ ಶಾಲೆ ಮು.ಗು. ಬಸಪ್ಪ ವೇದಿಕೆ ಮೇಲಿದ್ದರು.
ಗುರುಮಠಕಲ್ ವಲಯದ ವಿವಿಧ ಶಾಲೆಯ ಮುಖ್ಯಗುರುಗಳು, ಸಹ ಶಿಕ್ಷಕರು ಮತ್ತು ವಿವಿಧ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು. ಶಿಕ್ಷಣ ಇಲಾಖೆಯಿಂದ ಸೇವೆಯಿಂದ ನಿವೃತ್ತಿ ಹೊಂದಿದ ಸಾಯಪ್ಪ ಶಿಕ್ಷಕರಿಗೆ ವಿಷೇಶವಾಗಿ ಸನ್ಮಾನಿಸಲಾಯಿತು.