ಗೋಗಿ; ವೈದ್ಯಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಶಹಾಪುರ: ವೈದ್ಯರು ಕರ್ತವ್ಯಕ್ಕೆ ಸರಿಯಾಗಿ ಸ್ಪಂದಿಸದೇ ನಿರ್ಲಕ್ಷ್ಯ ಧೋರಣೆ ತಾಳುತ್ತಿರುವುದರಿಂದ ಗೋಗಿ ಸಾರ್ವಜನಿಕ ಆಸ್ಪತ್ರೆ ಇದ್ದೂ ಇಲ್ಲದಂತಾಗಿದೆ. ಆದ್ದರಿಂದ ಇಲ್ಲಿನ ಮುಖ್ಯ ವೈದ್ಯ ಡಾ. ವೆಂಕಟೇಶ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಗೋಗಿ.ಕೆ ಗ್ರಾಮದ ಚಂದ್ರು ಬಿ.ಕಟ್ಟಿಮನಿ, ಎಸ್.ಎಂ. ಹುಸೇನಿ ಜಿಲ್ಲಾ ಮುಖ್ಯ ವೈದ್ಯಾಧಿಕಾರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿ, ಸಾರ್ವಜನಿಕ, ಜನಪ್ರತಿನಿಧಿಗಳು ಹೇಳಿದ ಸಮಸ್ಯಗಳಿಗೆ ಸ್ಪಂದಿಸುವದಿಲ್ಲ. ಏನಾದರೊಂದು ನೆಪ ಹೇಳುತ್ತಾ ರೋಗಿಗಳ ಆರೈಕೆ ಮಾಡುವಲ್ಲಿ ನಿಷ್ಕಾಳಜಿ ತೋರಿಸುತ್ತಿದ್ದಾರೆ. ಇತ್ತೀಚಿಗೆ ಗೋಗಿಯ ರಸ್ತೆಯಲ್ಲಿ ಸಣ್ಣ ಪುಟ್ಟ ಅಪಘಾತಗಳಾದಾಗ ಸಕಾಲಕ್ಕೆ ಬಂದು ಚಿಕಿತ್ಸೆ ನೀಡದೆ ತಾವು ವೈದ್ಯರೆಂಬುದನ್ನೆ ಮರೆತಿದ್ದಾರೆ. ಸಾರ್ವಜನಿಕ ಸೇವೆಯ ಬಗ್ಗೆ ಕಾಳಜಿಯೇ ಇಲ್ಲದಂತಾಗಿದೆ. ಇವರ ಸೇವೆ ಗೋಗಿ ಗ್ರಾಮಕ್ಕೆ ಅವಶ್ಯಕತೆಯಿರುವುದಿಲ್ಲ. ತಾಲೂಕಾಧಿಕಾರಿಗಳು ಸೂಕ್ತ ಕ್ರಮ ತೆಗದುಕೊಳ್ಳಬೇಕು, ಇಲ್ಲವಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.