ತೊಗರಿ ಕೇಂದ್ರದ ಸದುಪಯೋಗಕ್ಕೆ ಕರೆ
ಸುರಪುರ: ಹತ್ತಿರದ ಹಸನಾಪುರ ಎಪಿಎಂಸಿ ಕಚೇರಿಯ ಆವರಣದಲ್ಲಿ ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತು ತೊಗರಿ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಶನಿವಾರ ತೊಗರಿ ಖರೀದಿ ಕೇಂದ್ರವನ್ನು ಆರಂಭಿಸಲಾಯಿತು.
ಎಪಿಎಂಸಿ ಅಧ್ಯಕ್ಷ ಬಸಪ್ಪ ಭಂಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ, ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಯನ್ನು ಈ ಖರೀದಿ ಕೇಂದ್ರದಲ್ಲಿ ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಎಪಿಎಂಸಿ ಕಾರ್ಯದರ್ಶಿ ಆರ್.ಎನ್. ಕಿತ್ತೂರು ಮಾತನಾಡಿ, ಖರೀದಿ ಕೇಂದ್ರದಲ್ಲಿ ಒಂದು ಎಕರೆಗೆ ನಾಲ್ಕು ಕ್ವಿಂಟಾಲ್ ತೊಗರಿ ಖರೀದಿಸಲಾಗುತ್ತದೆ. ಸರ್ಕಾರ 5 ಸಾವಿರ ಬೆಂಬಲ ಬೆಲೆ ನಿಗದಿಪಡಿಸಿದೆ. ಒಬ್ಬ ರೈತ 20 ಕ್ವಿಂಟಾಲ್ವರೆಗೆ ತೊಗರಿ ಮಾರಾಟ ಮಾಡಬಹುದು ಎಂದು ತಿಳಿಸಿದರು.
ಎಪಿಎಂಸಿ ಉಪಾಧ್ಯಕ್ಷ ಶಿವಣ್ಣ ಕರಡಕಲ್, ಸದಸ್ಯರಾದ ಹಣಮಂತ್ರಾಯ ಶುಕ್ಲಾ, ರುದ್ರಗೌಡ ಪಾಟೀಲ್, ಶಿವರಾಜ ಕಾಡ್ಲೂರು, ಸಿಬ್ಬಂದಿ ಅನ್ಸರಿ ಪಟೇಲ್, ಗೋಪಾಲ ಬಾಸೂತ್ಕರ್ ಮತ್ತು ರೈತರು ಇದ್ದರು.