ನಿಯತ್ತಿಗೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ?
ಶಹಾಪುರ: ಮಮತೆ ವಾತ್ಸಲ್ಯಕ್ಕೆ ಗೋವು, ಸಹಭೋಜನಕ್ಕೆ ಕಾಗೆ, ಸಹನೆ ತಾಳ್ಮೆಗೆ ಭೂಮಿ ಹೇಗೋ ಹಾಗೆಯೇ ಕೃತಜ್ಞತೆ ನಿಯತ್ತು ಮತ್ತು ವಿಶ್ವಾಸಕ್ಕೆ ಶ್ವಾನ(ನಾಯಿ) ಎಂಬುದಕ್ಕೊಂದು ಸೂಕ್ತ ನಿದರ್ಶನ ಇಲ್ಲಿದೆ. ಇಲ್ಲೊಂದು ನಾಯಿ ತನಗೆ ಅನ್ನ ಹಾಕುವ ಯಜಮಾನನ ಮಕ್ಕಳ ರಕ್ಷಣೆಗೆ ಶಾಲೆಯ ಮುಂದೆ ಕುಳಿತು ಕಾಳಜಿ ತೋರುವ ಪರಿಯನ್ನು ಕಂಡು ಪಟ್ಟಣದ ಹಳಿಪೇಟೆಯ ಜ್ಞಾನಗಂಗೋತ್ರಿ ಶಿಶುವಿಹಾರ ಮತ್ತು ಪ್ರಾಥಮಿಕ ಶಾಲಾ ಸಿಬ್ಬಂದಿ ಮತ್ತು ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರತಿನಿತ್ಯ ಶಾಲೆಗೆ ಬರುವ ಕಾದಂಬರಿ, ಪ್ರಶಾಂತ, ಆನಂದ, ಪ್ರದೀಪ, ಮಹಾಂತೇಶ ಎಂಬ ವಿದ್ಯಾರ್ಥಿಗಳ ಜೊತೆ ಬಂದ ಶ್ವಾನ ಇಡೀ ದಿವಸ ತನ್ನ ಯಜಮಾನನ ಮಕ್ಕಳ ರಕ್ಷಣೆಗೋಸ್ಕರವೇ ಬಂದಿದ್ದೇನೆ ಎಂಬಂತೆ ವಿದ್ಯಾರ್ಥಿಗಳ ಚಲನವಲನ ಅವರ ಕೋಣೆಗಳತ್ತ ನೋಡುತ್ತ ತನ ಕಾಳಜಿ ವ್ಯಕ್ತಪಡಿಸುತ್ತಿದ್ದುದು ಅದರ ಕರ್ತವ್ಯ ನಿಷ್ಠೆ ಮತ್ತು ನಿಯತ್ತನ್ನು ತೋರಿಸುತ್ತದೆ.