'ಮಹಿಳಾ ಶಿಕ್ಷಣಕ್ಕಾಗಿ ಹೋರಾಡಿದ ಫುಲೆ'
ಸಿಂಧನೂರು: ಬ್ರಿಟಿಷರ ಆಳ್ವಿಕೆಯಲ್ಲಿ ಮಹಿಳೆಯರ ಹಕ್ಕುಗಳು ಹಾಗೂ ಮಹಿಳೆಯರ ವಿದ್ಯಾಭ್ಯಾಸಕ್ಕಾಗಿ ಜೀವನವಿಡೀ ಹೋರಾಟ ಮಾಡಿ, ಭಾರತದ ಪ್ರಥಮ ಮಹಿಳಾ ಶಿಕ್ಷಕಿಯಾಗಿ ಅಮೂಲ್ಯ ಸೇವೆ ಸಲ್ಲಿಸಿ, ಭಾರತದಲ್ಲಿ ಮೊದಲ ಬಾಲಕಿಯರ ಶಾಲೆಯನ್ನು ತೆರೆದ ಕೀರ್ತಿ ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ ಎಂದು ಕಸಾಪ ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ ಹೇಳಿದರು. ನಗರದ ಪಟೇಲವಾಡಿಯ ಸ್ಫೂರ್ತಿ ಯುವತಿ ಮಂಡಳಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಪುಲೆ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಕಿ ಸರೋಜಾ ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಹೇಮಾವತಿ, ಖಾಜಾಬನ್ನಿ, ನಾಗರತ್ನಾ ಬಂಗಾರಶೆಟ್ಟಿ, ಯಂಕಮ್ಮ, ಅನುಸೂಯಾ, ಲಕ್ಷ್ಮೀ ಚಂದ್ರಶೇಖರ, ಫಕೀರಮ್ಮ, ಈರಮ್ಮ, ಅಬ್ಜಲಬಿ, ಪವಿತ್ರಾ, ಲಕ್ಷ್ಮೀ, ನಾಗಮ್ಮ, ಶಾಂತಾ, ಐಶ್ವರ್ಯ, ಚಂದ್ರಿಕಾ ಇದ್ದರು.
ಇಂದು ಮಕ್ಕಳ ಹಬ್ಬ
ರಾಯಚೂರು: ಕಲಾಸಂಕುಲ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರಾರ್ಥನಾ ಎಜುಕೇಷನಲ್ ಮತ್ತು ಚಾರಿಟೆಬಲ್ ಟ್ರಸ್ಟ್ ವತಿಯಿಂದ ಜ.5 ರಂದು ನಗರದಲ್ಲಿ ಜಿಲ್ಲಾಮಟ್ಟದ ಮಕ್ಕಳ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿದೆ. ನಗರದ ರಂಗಮಂದಿರದಲ್ಲಿ ಅಂದು ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಹಬ್ಬವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಗ್ರಾಮೀಣ ಶಾಸಕ ತಿಪ್ಪರಾಜ ಹವಾಲ್ದಾರ್ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಎಸ್ಪಿ ಎಂ.ಎನ್. ನಾಗರಾಜ್, ಉದ್ಯಮಿ ಈ. ಆಂಜನೇಯ, ನಗರಸಭೆ ಮಾಜಿ ಸದಸ್ಯ ಜಿಂದಪ್ಪ, ಖ್ಯಾತ ವೈದ್ಯ ಡಾ. ಎಸ್.ಎಸ್. ರೆಡ್ಡಿ, ನಗರಸಭೆ ಸದಸ್ಯ ಜಯಣ್ಣ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಜಗದೀಶ್ ವಕೀಲರು ವಿವಿಧ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕಲಾಸಂಕುಲ ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಡಿಗೇರ್ ಮನವಿ ಮಾಡಿದ್ದಾರೆ.
ಇಂದಿನಿಂದ ಪುರಾಣ
ಸಿಂಧನೂರು: ತಾಲೂಕಿನ ಬಳಗಾನೂರ ಬಳಿಯ ಉಟಕನೂರ ಬಸವಲಿಂಗ ದೇಶಿಕೇಂದ್ರ ಶಿವಯೋಗಿಗಳ ಮಠದಲ್ಲಿ ಜ.5ರಂದು 23ನೇ ಜಾತ್ರಾ ಮಹೋತ್ಸವ ನಿಮಿತ್ತ ಗುಡ್ಡಾಪುರ ದಾನಮ್ಮದೇವಿ ಪುರಾಣ ಪ್ರಾರಂಭವಾಗಲಿದೆ ಎಂದು ಸರ್ವ ಸದ್ಭಕ್ತ ಮಂಡಳಿ ತಿಳಿಸಿದೆ. ಪುರಾಣವನ್ನು ರೋಣದ ಶೇಖರಯ್ಯ ಶಾಸ್ತ್ರಿಗಳು, ಹಳೇಕೋಟೆ ಪಂಪಾಪತಿ ಗವಾಯಿಗಳು ನಡೆಸಿ ಕೊಡುವರು. ತಬಲಾ ಸಾಥಿಯನ್ನು ಮಲ್ಲಿನಾಥಸ್ವಾಮಿ, 24ರಂದು ಪುರಾಣ ಮಂಗಲ ನೆರವೇರುವುದು. ಸಂಜೆ ರುದ್ರಾಭಿಷೇಕ, ಬಿಲ್ವಾರ್ಚನೆ, ಹೂವಿನ ರಥೋತ್ಸವಗಳು ಜರುಗುವುವು. ಪ್ರತಿದಿನ ರಾತ್ರಿ 7ರಿಂದ 9ರವರೆಗೆ ನಡೆಯುವುದು. ಪುರಾಣಕ್ಕೆ ಗ್ರಾಮಸ್ಥರು ಆಗಮಿಸಬೇಕೆಂದು ಕೋರಿದೆ.
ಪದಾಧಿಕಾರಿಗಳು
ಮುದಗಲ್: ಪಟ್ಟಣದ ಹಡಪದ ಹಪ್ಪಣ್ಣ ಸಮಾಜದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಅಮರೇಶ ಕಂದಗಲ್ ತಿಳಿಸಿದರು. ಅಧ್ಯಕ್ಷರಾಗಿ ಗುಂಡಪ್ಪ ಕಿಲ್ಲಾ ಮುದಗಲ್, ಗೌರವಾಧ್ಯಕ್ಷರಾಗಿ ತಿಪ್ಪಣ್ಣ ಮೇಸ್ತಿಪೇಟೆ, ಉಪಾಧ್ಯಕ್ಷರಾಗಿ ಗದ್ದೆಪ್ಪ ಎಂ. ಜಕ್ಕೆರಮಡು, ಪ್ರಧಾನ ಕಾರ್ಯದರ್ಶಿಯಾಗಿ ಅಮರೇಶ ಕಂದಗಲ್, ಸಹ ಕಾರ್ಯದರ್ಶಿ ಈಶಪ್ಪ ಮೇಸ್ತಿಪೇಟೆ, ಖಜಾಂಚಿ ಮಹಾಂತೇಶ ಇಟ್ಟಂಗಿ, ಸಂ.ಕಾರ್ಯದರ್ಶಿ ಶೇಖರಪ್ಪ ಮೇಸ್ತಿಪೇಟೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹನುಮಂತ ರಾಮತ್ನಾಳ ಅವರನ್ನು ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.