ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪಾಲಿಕೆ- ಜಲಮಂಡಳಿಗೆ ಕುರುಡೆ?

Lingaraj Badiger
Updated On : 6 Jan 2014, 11:10 am

ಕ.ಪ್ರ. ವಾರ್ತೆ, ಗುಲ್ಬರ್ಗ, ಜ.5
ಎಂಜಿನಿಯರ್‌ಗಳು, ಸಕ್ಕಿಂಗ್ ಯಂತ್ರ, ಪೌರ ಕಾರ್ಮಿಕರು ಎಲ್ಲರೂ ಇದ್ದೇವೆ. ನಮ್ಮಲ್ಲಿ ಎಲ್ಲಾ ಸಿಬ್ಬಂದಿ- ಸಲಕರಣೆ ಉಂಟು. ನಗರ ನೈರ್ಮಲ್ಯ ಕಾಪಾಡುವವರು ನಾವೇ ಎಂದು ನಿತ್ಯ ಬರೀ ಬಡಾಯಿ ಕೊಚ್ಚಿಕೊಳ್ಳುವ ಇಲ್ಲಿನ ಮಹಾನಗರ ಪಾಲಿಕೆ ಹಾಗೂ ಜಲ ಮಂಡಳಿಗಳಿಗೆ ಜೇವರ್ಗಿ ಕ್ರಾಸ್‌ನಿಂದ ಆನಂದ ಹೋಟೆಲ್‌ಗೆ ಸಂಪರ್ಕ ಕಲ್ಪಿಸುವ ವಿದ್ಯಾನಗರ ಬಡಾವಣೆ ಮೂಲಕ ಸಾಗುವ ರಸ್ತೆಯಲ್ಲಿರುವ ಒಳಚರಂಡಿ ಮ್ಯಾನ್‌ಹೋಲ್ ಸವಾಲೆಸೆದಿದೆ.
ಕಳೆದ ಅನೇಕ ತಿಂಗಳಿಂದ ಈ ಮ್ಯಾನ್‌ಹೋಲ್‌ನಿಂದ ಒಳಚರಂಡಿ ನೀರು ಪ್ರವಾಹೋಪಾದಿಯಲ್ಲಿ ಹರಿದು ಮುಖ್ಯರಸ್ತೆಯಲ್ಲೇ ಮಡುಗಟ್ಟಿ ನಿಲ್ಲುತ್ತಿದ್ದರೂ ಚರಂಡಿ ನಿರ್ವಹಣೆ ಹೊಣೆ ಹೊತ್ತಿರುವ ಜಲಮಂಡಳಿಯಾಗಲಿ, ನಗರ ನೈರ್ಮಲ್ಯ ಹೊಣೆ ಹೊತ್ತಿರುವ ಪಾಲಿಕೆಯಾಗಲಿ ಕ್ಯಾರೆ ಎನ್ನುತ್ತಿಲ್ಲ.
ಮಹತ್ವದ ರಸ್ತೆ: ಈ ರಸ್ತೆಯಲ್ಲಿ 3 ಬಸ್ ಡೀಪೋಗಳು, ಶರಣಬಸವೇಶ್ವರ ವಿದ್ಯಾಲಯ, ಸೇಂಟ್ ಜೋಸೆಫ್ ಶಾಲೆ ಸೇರಿದಂತೆ ಹಲವು ಶಾಲಾ- ಕಾಲೇಜುಗಳಿವೆ. ಇನ್ನು ಶ್ರೀಕೃಷ್ಣ ಮಂದಿರ ಸೇರಿದಂತೆ ಅನೇಕ ಧಾರ್ಮಿಕ ತಾಣಗಳಿಗೂ ಇದೇ ಸಂಪರ್ಕ ರಸ್ತೆ. ಇದು ಬಿಟ್ಟರೆ ಅನ್ಯ ಮಾರ್ಗಗಳಿಲ್ಲ.
ಶಾಲಾ- ಕಾಲೇಜು ವಿದ್ಯಾರ್ಥಿಗಳು, ಮಂದಿರ- ಮಸೀದಿಗೆ ಹೋಗುವ ಭಕ್ತಾದಿಗಳೆಲ್ಲರೂ ನಿತ್ಯವೂ ಚಂರಡಿಯಿಂದ ಹರಿದು ಬರುವ ಕೊಳಕನ್ನೆಲ್ಲ ದಾಟಿಕೊಂಡೋ ಹೋಗುವಂತಾಗಿದೆ. ಅನೇಕ ಸಂದರ್ಭಗಳಲ್ಲಿ ಇಲ್ಲಿ ಶಾಲೆಗೆ ಹೋಗುವ ಧಾವಂತದಿಂದ ಮಕ್ಕಳು, ಪಾಲಕರು ಬೈಕ್ ಸಮೇತ ಚರಂಡಿ ನೀರಲ್ಲೇ ಬಿದ್ದ ಉದಾಹರಣೆಗಳಿವೆ.
ಸಂಚಾರದಟ್ಟಣೆ ರಸ್ತೆ: ನಿತ್ಯ ಸಾವಿರಕ್ಕೂ ಹೆಚ್ಚು ಬಸ್ಸುಗಳು, ನೂರಾರು ಆಟೋ, ಶಾಲಾ ಬಸ್‌ಗಳು ಓಡಾಡುವ ರಸ್ತೆಯಾದರೂ ಕಳೆದ ಹಲವು ವರ್ಷಗಳಿಂದ ಇದರ ನಿರ್ವಹಣೆ ನೆನೆಗುದಿಗೆ ಬಿದ್ದಿದೆ. ಪಾಲಿಕೆ ತನ್ನ ಎಸ್‌ಎಫ್‌ಸಿ ಅನುದಾನದಲ್ಲಿ ರಸ್ತೆ ದುರಸ್ತಿಗೆ ಯೋಜನೆ ರೂಪಿಸಿತ್ತು. ಸ್ಥಳೀಯ ರಾಜಕಾರಣಕ್ಕೆ ತುತ್ತಾಗಿ ಹಾಗೇ ಉಳಿಯುತ್ತಿದೆ.
ಈ ಮ್ಯಾನ್‌ಹೋಲ್ ಪಕ್ಕದಲ್ಲೇ ಇರುವ ಮನೆಯವರು 'ಕನ್ನಡಪ್ರಭ' ಜೊತೆ ಮಾತನಾಡಿ, 'ಸಾಕಷ್ಟು ಬಾರಿ ಪಾಲಿಕೆಗೆ, ಜಲಮಂಡಳಿಗೆ ಈ ವಿಚಾರ ಹೇಳಿದರೂ ಕ್ಯಾರೆ ಎನ್ನುತ್ತಿಲ್ಲ. ಕೊಳಕು ನೀರು ಮನೆಯೊಳಗೆ ಹೊಕ್ಕರಂತೂ ನರಕಯಾತನೆ. ವರ್ಷಗಳಿಂದ ಈ ಚರಂಡಿ ತುಂಬಿ ಹರಿಯುತ್ತಿದ್ದರೂ ಯಾರು ದುರಸ್ತಿಗೆ ಮುಂದಾಗುತ್ತಿಲ್ಲ' ಎಂದು ಅಳಲು ತೋಡಿಕೊಂಡರು.
ಈ ರಸ್ತೆ ಕಾಣುತ್ತಿಲ್ಲವೇ?: ಮಳೆಯಿಂದಾಗಿ ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಯೋಜನೆ ರೂಪಿಸಿದ್ದೇವೆಂದು ಹೇಳಿರುವ ಮಹಾನಗರ ಪಾಲಿಕೆ, ಕೇವಲ ಐವಾನ್- ಏ- ಪ್ರದೇಶದ ರಸ್ತೆಗಳ ದುರಸ್ತಿ ಮಾಡಿ ಸುಮ್ಮನಾಗಿದೆ. ಇಲ್ಲಿ ಸರ್ಕಾರಿ ಅತಿಥಿಗೃಹವಿದೆ. ಹೀಗಾಗಿ ಸಚಿವರು, ಹಿರಿಯ ಅಧಿಕಾರಿಗಳ ಮನೆಗಳು ಇಲ್ಲಿಯೇ ಇವೆ. ಎಲ್ಲರೂ ಇಲ್ಲೇ ಅಡ್ಡಾಡುವುದರಿಂದ ಇಲ್ಲಿನ ರಸ್ತೆಗಳು ಸ್ವಚ್ಛ, ಅಚ್ಚುಕಟ್ಟಾಗಿದ್ದರೆ ಸಾಕು. ಇತರೆ ರಸ್ತೆಗಳು ಹೇಗಿದ್ದರೇನು ಎಂಬಂತೆ ಉದಾಸೀನದಲ್ಲೇ ಪಾಲಿಕೆ, ಜಲಮಂಡಳಿ ನಗರದ ಇತರೆ ಪ್ರದೇಶಗಳಲ್ಲಿನ ಮ್ಯಾನ್‌ಹೋಲ್, ಹದಗೆಟ್ಟ ರಸ್ತೆಗಳ ಬಗ್ಗೆ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುದು ಜನರ ದೂರು.
ಇದೇ ರಸ್ತೆಗುಂಟ ಮಟನ್ ಶಾಪ್‌ಗಳಿವೆ. ಇಲ್ಲಿರುವ ಚರಂಡಿಗೇ ಶಾಪ್‌ಗಳಿಂದ ಉತ್ಪತ್ತಿಯಾಗುವ ಕಸ- ಕೊಚ್ಚೆ ಎಸೆಯಲಾಗುತ್ತದೆ. ಕೆಲವು ಬಾರಿ ಕೃಷ್ಣಮಂದಿರ ಹಿಂಭಾಗದ ರಸ್ತೆಯಲ್ಲೇ ಕಸ- ಕೊಚ್ಚೆ, ಪ್ರಾಣಿಗಳ ದೇಹದ ಭಾಗಗಳನ್ನೂ ರಾಶಿರಾಶಿ ಎಸೆಯಲಾಗುತ್ತದೆ. ಇದೆಲ್ಲವೂ ಕೆಲವು ಸಾರಿ ಚರಂಡಿಗೆ ಸೇರಿ ಮ್ಯಾನ್‌ಹೋಲ್ ಬ್ಲಾಕ್ ಆಗಿ ಕೊಳಕು ನೀರು ರಸ್ತೆಗೆ ಹರಿಯುತ್ತಿರುತ್ತದೆ.
ಕಾಡುತ್ತಿರುವ ಅನಾರೋಗ್ಯ: ನಿತ್ಯವೂ ಚರಂಡಿ ಕೊಳಕು ನೀರಿನಲ್ಲೇ ತಿರುಗಾಡುವವರಿಗೆ ಚರ್ಮಸೋಂಕು, ಶ್ವಾಸಕೋಶ ಕಾಯಿಲೆಗಳು ಕಾಡದಿರದು. ವಿದ್ಯಾನಗರದ ಈ ರಸ್ತೆಯಲ್ಲಿನ ಮನೆಯವರಿಗೆ ಸೊಳ್ಳೆಕಾಟ ಹೆಚ್ಚಿದೆ. ಇಲ್ಲಿ ಸಂಚರಿಸುವ ಶಾಲಾ ಮಕ್ಕಳು ತಲೆಸುತ್ತಿ ಬೀಳುತ್ತಿದ್ದಾರಂತೆ, ಪಾಲಕರು ಈ ಕುರಿತಂತೆ ಶಾಲಾ ಆಡಳಿತ ಮಂಡಳಿಗಳಿಗೂ ದೂರು ನೀಡಿದ್ದಾರೆ. ಕೊಳಚೆ ನೀರಿಗೆ ಮುಕ್ತಿಯೇ ಇಲ್ಲವೆಂದ ಮೇಲೆ ಏನು ಮಾಡಲಾಗುತ್ತದೆ ಎಂದು ಶಾಲಾ ಮಕ್ಕಳ ಪಾಲಕರು ಕಂಗಾಲಾಗಿದ್ದಾರೆ.

ಆರೋಗ್ಯಾಧಿಕಾರಿ- ಪರಿಸರಎಂಜಿನಿಯರ್, ನೈರ್ಮಲ್ಯ ನಿರೀಕ್ಷಕರೆಲ್ಲಿ?
ಜಲ ಮಂಡಳಿ ಮ್ಯಾನ್‌ಹೋಲ್ ದುರಸ್ತಿಗೆ ಮುಂದಾಗುತ್ತಿಲ್ಲ, ಚೆಂಬರ್‌ನಿಂದ ಕೊಚ್ಚೆ ನೀರು ಹೊರಬಂದಾಗ ಪಾಲಿಕೆಯಾದರೂ ಅಲ್ಲಿ ಬ್ಲೀಚಿಂಗ್ ಪೌಡರ್ ಹಾಕುವ, ಜನಾರೋಗ್ಯಕ್ಕೆ ತೊಂದರೆಯಾಗದಂತೆ ಕ್ರಮ ಜರುಗಿಸಬಹುದಾಗಿತ್ತು. ಆ ಕೆಲಸವು ಇಲ್ಲಿ ನಡೆದಿಲ್ಲ. ಪಾಲಿಕೆಯ ಆರೋಗ್ಯ ವಿಭಾಗ, ವಿದ್ಯಾನಗರ ನೈರ್ಮಲ್ಯ ನಿರೀಕ್ಷಕ, ನಗರ ಪರಿಸರ ಕಾಪಾಡುವ ಪರಿಸರ ಎಂಜಿನಿಯರ್‌ಗಳು ಎಲ್ಲಿ ಎಂದು ಕೇಳುವಂತಾಗಿದೆ.
ಐವಾನ್- ಏ- ಷಾಹಿ ಪ್ರದೇಶ, ಡಿಸಿ ಕಚೇರಿ ಸುತ್ತಲಿನ ರಸ್ತೆ, ಬಡಾವಣೆ, ಸರ್ದಾರ್ ಪಟೇಲ್ ವೃತ್ತ, ಸೂಪರ್ ಮಾರ್ಕೆಟ್ ಪ್ರದೇಶದ ಹೋಟೆಲ್, ಲಾಡ್ಜ್‌ಗಳಿಂದ ಹರಿಯುವ ನೀರು ವ್ಯವಸ್ಥಿತವಾಗಿ ಸಾಗಿದರೆ ಸಾಕು ಎಂದು ಇವರೆಲ್ಲರೂ ಮೌನವಾಗಿದ್ದಾರೆ. ಎಲ್ಲಿ ನಿಜವಾಗಿಯೂ ಸಮಸ್ಯೆ ಇದೆಯೋ ಅಲ್ಲಿ ಬಂದು ಪರಿಹಾರ ಕೆಲಸ ಕೈಗೆತ್ತಿಕೊಳ್ಳದೆ ತಮ್ಮ ಸ್ವಾರ್ಥ ಸಾಧನೆಗೆ ಈ ತಂಡ ಮುಂದಾಗುತ್ತಿದೆ ಎಂದು ಜನತೆ ಆಕ್ರೋಶ ಹೊರಹಾಕುತ್ತಿದ್ದಾರೆ.
ಜಲಮಂಡಳಿ ಜಾಣತನಕ್ಕೆ ಕನ್ನಡಿ
ಜಲಮಂಡಳಿ ನಗರದ ಒಳಚರಂಡಿ ನಿರ್ವಹಣೆಗೆ 2 ಸಕ್ಕಿಂಗ್ ಯಂತ್ರಗಳು, ಸಿಬ್ಬಂದಿ ಜೊತೆ ಕೆಲಸ ಮಾಡುತ್ತಿದೆ ಎಂದು ಹೇಳುತ್ತಿದೆ. ಆದರೆ ಜೇವರ್ಗಿ ಕ್ರಾಸ್‌ನ ಈ ಬಾಯಿ ತೆರೆದ ಚೆಂಬರ್ ಅದಕ್ಕೆ ಕಂಡಿಲ್ಲವೇ, ವರ್ಷದಿಂದ ಹಾಗೇ ಹೊಲಸು ನೀರು ಹೊರಗೆ ಹರಿಯುತ್ತ ಜನತೆಗೆ ತೊಂದರೆ ಕೊಡುತ್ತಿರುವಾಗ ಜಲಮಂಡಳಿ ತನ್ನೆಲ್ಲ ಕೆಲಸ ಬದಿಗೊತ್ತಿ ಈ ರಸ್ತೆಯಲ್ಲಿನ ಸಮಸ್ಯೆಗೆ ಪರಿಹಾರ ಹುಡುಕಿ ಜನರು ನಿರುಮ್ಮಳರಾಗುವಂತೆ ಮಾಡಬಾರದೆ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement