ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮರಳು ಸಾಗಣೆಗೆ ಅಧಿಕಾರಿಗಳ ಸಾಥ್?

Lingaraj Badiger
Updated On : 7 Jan 2014, 12:10 pm

ಶಹಾಬಾದ್: ಚಿತ್ತಾಪುರ ತಾಲೂಕಿನ ಹೊನಗುಂಟಾ, ಇಂಗಳಗಿ ಗ್ರಾಮದ ಬಳಿಯ ಕಾಗಿಣಾ ನದಿಯಿಂದ ಗುಲ್ಬರ್ಗ ರೈಲು ನಿಲ್ದಾಣದ ಕೆಲಸದ ನೆಪದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಟಿಪ್ಪರ್‌ಗಳನ್ನು ಶಹಾಬಾದ್‌ನ ಜೇವರ್ಗಿ ರಸ್ತೆ ಕ್ರಾಸ್ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್‌ಗಳನ್ನು ಗೋಳಾ ಗ್ರಾಮ, ಕರಾದಸಂಸ, ಬಿಜೆಪಿ ಮುಖಂಡರು ಭಾನುವಾರ ಮಧ್ಯಾಹ್ನ ತಡೆದು, ಮರಳು ಸಾಗಣೆಯ ಪರವಾನಗಿ ತೋರಿಸಲು ಆಗ್ರಹಿಸಿದ ಘಟನೆ ನಡೆಯಿತು.
ಸುಮಾರು ನಾಲ್ಕು ಗಂಟೆಗಳ ಕಾಲ ಟಿಪ್ಪರ್‌ಗಳನ್ನು ತಡೆದು ನಿಲ್ಲಿಸಿದರೂ ಕಂದಾಯ ಇಲಾಖೆ, ಪೊಲೀಸ್, ಲೋಕೋಪಯೋಗಿ ಇಲಾಖೆಯ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಇರುವುದರಿಂದ ಸಾಯಂಕಾಲ ನಾಲ್ಕು ಟಿಪ್ಪರಗಳು ಹಿಂದಕ್ಕೆ ಹೋದವು.
ಪರವಾನಗಿ ಪತ್ರ ತೋರಿಸಲು ಪಟ್ಟು: 3 ಗಂಟೆ ವೇಳೆಗೆ ಸ್ಥಳೀಯವಾಗಿ ಟ್ರ್ಯಾಕ್ಟರ್‌ನಲ್ಲಿ ಮರಗಳು ಸಾಗಿಸುವವರು, ದಲಿತ ಸಂಘರ್ಷ ಸಮಿತಿ ಸಂಚಾಲಕ ಕೃಷ್ಣಪ್ಪ ಕರಣಿಕ, ಬಿಜೆಪಿ ಜಿಲ್ಲಾ ಯುವ ಘಟಕದ ಕಾರ್ಯದರ್ಶಿ ಬಸವರಾಜ ಮದ್ರಕಿಯವರು ಹೊನಗುಂಟಾ, ಇಂಗಳಿಗೆ ಬಳಿಯ ಕಾಗಿಣಾ ನದಿಯಲ್ಲಿ ಅಕ್ರಮವಾಗಿ ಮರಳು ಸಾಗಿಸಲು ಹೋಗುತ್ತಿದ್ದಾಗ ನಗರದ ಅಶೋಕ ನಗರ ವೃತ್ತದ ಬಳಿ 4 ಟಿಪ್ಪರ್‌ಗಳನ್ನು ತಡೆದು ನಿಲ್ಲಿಸಿದರು. ಟಿಪ್ಪರ್ ತಡೆಯುತ್ತಿದ್ದಂತೆ ಮುಖಂಡರಿಗೆ ಅಧಿಕಾರಿಗಳಿಂದ ಒತ್ತಡ ಬಂದರೂ ಜಗ್ಗಲಿಲ್ಲ. ಮರಳು ಸಾಗಣೆಗೆ ಪಡೆದ ಪರವಾನಗಿ ಪತ್ರ ತೋರಿಸಬೇಕೆಂದು ಪಟ್ಟು ಹಿಡಿದರು.
ಹೊನಗುಂಟಾ, ಇಂಗಳಿಗೆ ಬಳಿಯ ಕಾಗಿಣಾ ನದಿಯಲ್ಲಿ ಟಿಪ್ಪರ್ ಮೂಲಕ ಮರಳು ಎತ್ತಲಾಗುತ್ತರುವ ವಿಷಯ ತಿಳಿದ ಬಿಜೆಪಿ ಮುಖಂಡ ಬಸವರಾಜ ಮದ್ರಕಿ, ಪತ್ರಕರ್ತರೊಂದಿಗೆ ಸ್ಥಳಕ್ಕೆ ಹೋದಾಗ, ಮರಳು ಸಾಗಣಿಕೆದಾರರು ನದಿ ಪಾತ್ರದಲ್ಲಿದ್ದ ಹಿಟಾಚಿಯನ್ನು ಹೊಲದತ್ತ ಕೊಂಡೊಯ್ಯಲಾಯಿತು.
ರೇಲ್ವೆ ನಿಲ್ದಾಣ ಕಾಮಗಾರಿಗೆ..: ಸ್ಥಳದಲ್ಲಿದ್ದ ಕೆಲವರು ನಾವು ಮರಳನ್ನು ಗುಲ್ಬರ್ಗದ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿಗೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದರು. ಈ ಮರಳು ಸಾಗಾಣಿಕೆಗೆ ಯಾವುದೇ ಪರವಾನಗಿ ಕುರಿತು ಕೇಳಿದಾಗ, 'ಈ ಮರಳನ್ನು ಮಾರಲು ಒಯ್ಯತ್ತಿಲ್ಲ. ರೇಲ್ವೆ ಇಲಾಖೆ ಕೆಲಸಕ್ಕೆ ಒಯ್ಯತ್ತಿದ್ದೇವೆ' ಎಂದು ಹೇಳಿ ಪರವಾನಗಿ ಪತ್ರ ತೋರಿಸುವಲ್ಲಿ ವಿಫಲರಾದರು. ಕೆಲ ಟಿಪ್ಪರ್‌ಗಳಿಗೆ ಮಾತ್ರ ರೇಲ್ವೆ ಕಾಮಗಾರಿಗಾಗಿ ಎಂದು ಜೆರಾಕ್ಸ್ ಪ್ರತಿ ಅಂಟಿಸಿದ್ದು, ಅದರ ಮೇಲೆ ಸರ್ಕಾರದಿಂದ ಯಾವುದೇ ಪರವಾನಗಿ ಕೊಟ್ಟ ರುಜು, ಮೊಹರು ಇರಲಿಲ್ಲ.
ರಸ್ತೆ ಬದಿ ಮರಳು: ಮರಳು ಸಾಗಾಣಿಕೆ ಟಿಪ್ಪರ್‌ಗಳನ್ನು ತಡೆ ಹಿಡಿದ ಬಗ್ಗೆ ಮಾಹಿತಿ ತಿಳಿದ ಎರಡು ಟಿಪ್ಪರ್ ಚಾಲಕರು ಹೊನಗುಂಟಾ ಗ್ರಾಮದ ಹಳ್ಳದ ರಸ್ತೆಯ ಬದಿಯಲ್ಲಿ ಮರಳನ್ನು ಚೆಲ್ಲಿ ಟಿಪ್ಪರ್ ಸಹಿತ ಪರಾರಿಯಾದರು. ಸರ್ಕಾರದಿಂದ ಪರವಾನಗಿ ಪಡೆದಿದ್ದರೆ ಮರಳನ್ನು ಯಾಕೆ ರಸ್ತೆ ಬದಿ ಚೆಲ್ಲಿ ಓಡಿ ಹೋದರು ಎಂಬ ಪ್ರಶ್ನೆ ಉದ್ಭವವಾಗಿದೆ.
ಸ್ಥಳಕ್ಕೆ ಬಾರದ ಅಧಿಕಾರಿಗಳು: ರಾಜ್ಯಾದ್ಯಂತ ಮರಳು ಸಾಗಣೆಗೆ ನಿಷೇಧವಿದ್ದರೂ ಅಕ್ರಮವಾಗಿ ರಾಜಾರೋಷವಾಗಿ ಹಗಲು- ರಾತ್ರಿ ಹಿಟಾಚಿ ಮೂಲಕ ಮರಳು ಲೂಟಿ ಮಾಡಿ ಇಂಗಳಗಿ, ಕುಂದನೂರ ಗ್ರಾಮಗಳಿಂದ ವಾಡಿ ಮೂಲಕ, ಹೊನಗುಂಟಾ ಗ್ರಾಮದಿಂದ ಶಹಾಬಾದ್ ಮೂಲಕ ಸಾಗಣೆ ಮಾಡುತ್ತಿದ್ದದರೂ ಕಾನೂನು ಕ್ರಮ ಕೈಗೊಳ್ಳಬೇಕಾದ ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕುಳಿತಿವೆ.

'ಅಕ್ರಮ ಮರಳು, ಪ್ರಿಯಾಂಕ್ ಪಾಲು'
ಗುಲ್ಬರ್ಗ: ಚಿತ್ತಾಪುರ ಮತಕ್ಷೇತ್ರ ವ್ಯಾಪ್ತಿಯ ಬಾಗೋಡಿ, ಮುತ್ತಗಿ, ಹೊನಗುಂಟಾ, ಇಂಗಳಗಿ, ಕುಂದನೂರ ಬಳಿ ಕಾಗಿಣಾ. ಭೀಮಾ ನದಿಯಲ್ಲಿ ಅಕ್ರಮವಾಗಿ ಮರಳನ್ನು ಲೂಟಿ ಮಾಡುತ್ತಿರುವವರು ಕಾಂಗ್ರೆಸ್ ಮುಖಂಡರಾಗಿದ್ದು, ಇದರಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಪಾಲುದಾರರಿದ್ದಾರೆ ಎಂದು ಮಾಜಿ ಶಾಸಕ ವಾಲ್ಮೀಕಿ ನಾಯಕ ಮತ್ತೊಮ್ಮೆ ತಮ್ಮ ಆರೋಪವನ್ನು ಪುನರುಚ್ಚರಿಸಿದರು. ತಾಲೂಕಿನ ಎಲ್ಲ ಅಧಿಕಾರಿಗಳು ಶಾಸಕರ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿದ್ದು, ಕಾನೂನನ್ನು ಗಾಳಿಗೆ ತೂರಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಪೋಲಿಸ್ ವರಿಷ್ಠಾಧಿಕಾರಿಗಳು ಕೂಡಲೇ ಅಕ್ರಮ ಲೂಟಿ, ಸಹಕರಿಸುತ್ತಿರುವ ಅಧಿಕಾರಿಗಳ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement