ಅಪೂರ್ಣ ಕಾಮಗಾರಿ; ಶಾಸಕ ಗುತ್ತೇದಾರ ಗರಂ
ಕ.ಪ್ರ. ವಾರ್ತೆ, ಅಫಜಲ್ಪುರ, ಜ.7
ಅಲ್ಪಸಂಖ್ಯಾತರ ಬಾಲಕಿಯರಿಗಾಗಿ ಸುಮಾರು 72 ಲಕ್ಷ ವೆಚ್ಚದಲ್ಲಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ವಸತಿ ನಿಲಯ ಕಾಮಗಾರಿಯು ಆಮೆಗತಿಯಲ್ಲಿ ಸಾಗಿದ್ದು, ಶಾಸಕ ಮಾಲೀಕಯ್ಯ ಗುತ್ತೇದಾರ ಗುತ್ತಿಗೆದಾರರ ಮೇಲೆ ಹರಿಹಾಯ್ದರು.
ಅವರು ಕರ್ಜಗಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಸತಿ ನಿಲಯ ಕಾಮಗಾರಿ ವೀಕ್ಷಿಸಿ ಅಪೂರ್ಣ ಕಾಮಗಾರಿಯ ಕುರಿತು ಮತ್ತು ಅವಧಿ ಮುಗಿದರೂ ಕಾಮಗಾರಿ ಮುಗಿಯದ ಕುರಿತು ಜಿಪಂ ಸದಸ್ಯ ಮತೀನ್ ಪಟೇಲ್ ಅವರು ಶಾಸಕರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಅಪೂರ್ಣ ಕಾಮಗಾರಿಯನ್ನು ಉದ್ಘಾಟಿಸಲು ಬರುವುದಿಲ್ಲ. ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರರಿಗೆ ತರಾಟೆಗೆ ತೆಗೆದುಕೊಂಡರು.
ವಸತಿ ನಿಲಯದ ಸುತ್ತಲೂ ಕಾಂಪೌಂಡ್ ನಿರ್ಮಾಣಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಿಂದ ಹಣ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದ ಶಾಸಕರು, ಕಾಮಗಾರಿ ಒಂದು ವಾರದೊಳಗೆ ಮುಗಿಯಬೇಕೆಂದು ಎಚ್ಚರಿಸಿದರು. ಇನ್ನೂ ವಸತಿ ನಿಲಯಕ್ಕೆ ಸರಿಯಾದ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಸುಸಜ್ಜಿತ ಅಡುಗೆ ಕೋಣೆ, ವಸತಿ ಕೋಣೆಗಳನ್ನು ಸರಿಯಾಗಿ ನಿರ್ಮಿಸಬೇಕು. ಒಟ್ಟಿನಲ್ಲಿ ವಿದ್ಯಾರ್ಥಿನಿಯರಿಗೆ ಯಾವುದೇ ರೀತಿಯ ಕುಂದುಕೊರತೆ ಬಾರದಂತೆ ವ್ಯವಸ್ಥೆ ಕಲ್ಪಿಸಬೇಕು. ಕಾಮಗಾರಿ ಪೂರ್ಣಗೊಂಡ ನಂತರ ಉದ್ಘಾಟನೆ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ವಿಶ್ವನಾಥ ರೇವೂರ, ಬಿ.ವೈ. ಪಾಟೀಲ್, ಸಿದ್ದು ಹಳಗೋಧಿ, ತಾಪಂ ಸದಸ್ಯ ಶಿವಪುತ್ರಪ್ಪ ಗೌಡಗಾಂವ, ತಾಪಂ ಸದಸ್ಯೆ ಅನೀತಾ ಅಕ್ಕಲಕೋಟೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ. ನಂದಗಿರಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ, ಗ್ರಾ.ಪಂ ಅಧ್ಯಕ್ಷ ವಾಹೀದ್ ಪಾಶಾ ಇದ್ದರು.