ಅಹಿತಕರ ಘಟನೆಗೆ ಅವಕಾಶ ಕೊಡಬೇಡಿ
ಶಹಾಪುರ: ಮಕರ ಸಂಕ್ರಾಂತಿ (ಜ.14)ಯಂದು ಪಟ್ಟಣದ ಸಂಗಯ್ಯ ಭೀಮರಾಯ ಜಾತ್ರಾಮಹೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಒಂದೇ ದಿನ ಆಚರಿಸಲಾಗುತ್ತಿದ್ದು, ತಾಲೂಕಿನಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಉಭಯ ಸಮಾಜದ ಮುಖಂಡರು ಶ್ರಮ ವಹಿಸಬೇಕೆಂದು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಮನವಿ ಮಾಡಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೂ ಮತ್ತು ಮುಸ್ಲಿಂ ಮುಖಂಡರು ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ನೋಡಿಕೊಳ್ಳಬೇಕು. ಕಿಡಿಗೇಡಿಗಳು ದುಷ್ಕೃತ್ಯ ಎಸಗದಂತೆ ಉಭಯ ಮುಖಂಡರು ಎಚ್ಚರ ವಹಿಸಬೇಕು. ಎಲ್ಲರೂ ಸಂಭ್ರಮದಿಂದ ಹಬ್ಬಗಳನ್ನು ಆಚರಿಸೋಣ ಎಂದರು.
ಪೊಲೀಸರೊಂದಿಗೆ ಸಹಕರಿಸಿ: ಪ್ರಾಸ್ತಾವಿಕವಾಗಿ ಮಾತನಾಡಿದ ಪಿಐ ಜೆ.ಎಸ್. ನ್ಯಾಮೇಗೌಡರ್, ರಸ್ತೆಗಳಲ್ಲಿ ಬ್ಯಾನರ್ ಅಥವಾ ಧ್ವಜಗಳನ್ನು ಕಟ್ಟಬೇಕಾದಲ್ಲಿ ಸಂಬಂಧಪಟ್ಟ ಪುರಸಭೆ ಇಲಾಖೆಯಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಯಾವುದೇ ಸೌಂಡ್ ಸಿಸ್ಟಂ ಡಿಸೆಬಲ್ಗಳು 100 ಮೀ. ಆಚೆ ಕೇಳಬಾರದು. ನಾವು ನಿಮ್ಮಗಳ ಸೇವಕರು, ನಿಮ್ಮ ಸೇವೆಗಾಗಿ ಬಂದವರು. ಸಾರ್ವಜನಿಕರು ನಮಗೆ ಸಹಕಾರ ನೀಡಿ. ಒಂದು ವೇಳೆ ಅಹಿತಕರ ಘಟನೆ ಜರುಗಿದರೆ ಕೂಡಲೇ ಕರೆ ಮಾಡಿ, ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಸಣ್ಣನಿಂಗಪ್ಪ ನಾಯ್ಕೋಡಿ, ಎಸ್.ಎನ್. ಖಾದ್ರಿ, ಬಿಜೆಪಿ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಚಿಲ್ಲಾಳ ಮಾತನಾಡಿದರು.
14ರಂದು ಮದ್ಯ ಮಾರಾಟಕ್ಕೆ ನಿಷೇಧ: ಅಂದು ನಡೆಯುವ ಉಭಯ ಮತ ಬಾಂಧವರ ಉತ್ಸವ ದಿನದಂದು ತಾಲೂಕಿನಲ್ಲಿ ಮದ್ಯ ಮಾರಾಟ ನಿಷೇಧ ಮಾಡಬೇಕೆಂದು ಎಸ್ಪಿ ಅವರನ್ನು ಸಾರ್ವಜನಿಕರು ಕೋರಿದರು. ಇದಕ್ಕೆ ಸ್ಪಂಸಿದ ಎಸ್ಪಿ, ಜ.14ರಂದು ಮದ್ಯ ಮಾರಾಟ ನಿಷೇಧಕ್ಕೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಶಹಾಪುರ ಸಿಪಿಐ ಸಂತೋಷ ಬನ್ನಟ್ಟಿ ಪಿಎಸ್ಐ ದೊಡ್ಡಪ್ಪ, ಚಂದ್ರಶೇಖರ ಸಾಲಿಮನಿ, ನಾಗಪ್ಪ ತಹಿಸಿಲ್ದಾರ, ಲಾಲ ಹಮ್ಮದ್ ಖುರೇಶಿ, ರಾಯಪ್ಪ ಸಾಲಿಮನಿ, ರವಿ ಆನೆಗುಂದಿ, ಅಭಿದ್ ಹಮ್ಮದ್, ಗೋಪಾಲ ಸುರುಪುರ, ತಲಕ್ಚಾಂದ್, ಯಲ್ಲಪ್ಪ ಹಳಕಟ್ಟಿ, ಭೀಮರಾಯ ದೊಡ್ಮನಿ, ಬಾಬುರಾವ್ ರಾಂಪೂರೆ ಸೇರಿದಂತೆ ಅನೇಕ ಗಣ್ಯರು ನಾಗರಿಕರು, ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.