ಪಿಯು ಶುಲ್ಕ ಹೆಚ್ಚಳಕ್ಕೆ ಎಐಡಿಎಸ್‌ಒ ವಿರೋಧ
ಗುಲ್ಬರ್ಗ: ಶೈಕ್ಷಣಿಕ ವರ್ಷದ ಕೊನೆಯಲ್ಲಿ ಸರ್ಕಾರ ಮತ್ತು ಪಿಯು ಮಂಡಳಿಗಳು ದಿಢೀರನೆ ಶುಲ್ಕವನ್ನು ಪ್ರಸಕ್ತ ಸಾಲಿನಲ್ಲಿಯೇ ಅನ್ವಯಿಸುವಂತೆ ಏರಿಸಿ, ರಾಜ್ಯದ ಲಕ್ಷಾಂತರ ಪಿಯು ವಿದ್ಯಾರ್ಥಿಗಳಿಗೆ ಅಘಾತ ನೀಡಲು ಮುಂದಾಗಿರುವುದನ್ನು ಎಐಡಿಎಸ್‌ಒ ವಿರೋಧ ವ್ಯಕ್ತಪಡಿಸಿದೆ.
ಸರ್ಕಾರದ ಎಲ್ಲಾ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ ಹಾಗೂ ಪಿಯು ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಕಳುಹಿಸಿದ ಆದೇಶದ ಪ್ರಕಾರ- ಪದವಿ ಪೂರ್ವ ಕಾಲೇಜುಗಳಲ್ಲಿ ಬೋಧನಾ ಶುಲ್ಕ, ಪ್ರವೇಶ, ಪ್ರಯೋಗಾಲಯ ಮತ್ತು ಪರೀಕ್ಷಾ ಶುಲ್ಕವನ್ನು ಶೇ.20ರಿಂದ 33ರ ವರೆಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಏರಿಸಲು ಆದೇಶಿಸಿರುವುದು ಸರಿಯಲ್ಲ ಎಂದು ತಿಳಿಸಿದೆ.
ಇದರಿಂದಾಗಿ ವಿವಿಧ ಕೋರ್ಸ್‌ಗಳ ಪಿಯು ವಿದ್ಯಾರ್ಥಿಗಳು 200ರಿಂದ 350ರವರೆಗೆ ಹೆಚ್ಚುವರಿ ಶುಲ್ಕ ಭರಿಸಬೇಕಾಗುತ್ತದೆ. ಈಗಾಗಲೇ ಶಿಕ್ಷಣವು ತೀವ್ರವಾಗಿ ವ್ಯಾಪಾರೀಕರಣಗೊಂಡಿದ್ದು, ಪೋಷಕರಿಗೆ ದೊಡ್ಡ ಹೊರೆಯಾಗಿದೆ. ಕೂಡಲೇ ಈ ಆದೇಶವನ್ನು ಸರ್ಕಾರ ಹಿಂಪಡೆಯಬೇಕೆಂದು ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ಶರ್ಮಾ ಆಗ್ರಹಿಸಿದ್ದಾರೆ.