ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಗುರುಮಠಕಲ್: ದೇಶದಲ್ಲಿ ಪದೇ ಪದೇ ಅಡುಗೆ ಅನಿಲ ಹಾಗೂ ಆಟೋ ಗ್ಯಾಸ್ ಬೆಲೆ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯರು ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಹಲವು ಬಾರಿ ಅಡುಗೆ ಅನಿಲ ಬೆಲೆ ಹೆಚ್ಚಿಸಿ ಜನಸಾಮಾನ್ಯರು ತತ್ತರಿಸುವಂತೆ ಮಾಡಿದೆ. ಈಗ ಮತ್ತೆ ಬೆಲೆ ಹೆಚ್ಚಿಸುವ ಮೂಲಕ ಬಡ ಮತ್ತು ಮಧ್ಯಮ ವರ್ಗದವರ ಬದುಕನ್ನು ಬರ್ಬರವನ್ನಾಗಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಅಸಮರ್ಪಕ ಆರ್ಥಿಕ ನೀತಿ ಹಾಗೂ ನಿರಂತರವಾಗಿ ಡೀಸೆಲ್ ಬೆಲೆ ಹೆಚ್ಚಳದಿಂದಾಗಿ ಮಾರುಕಟ್ಟೆಯಲ್ಲಿ ದಿನನಿತ್ಯದ ವಸ್ತುಗಳ ಬೆಲೆಗಳು ಹೆಚ್ಚಳವಾಗಿವೆ. ಇದರಿಂದ ಜನಸಾಮಾನ್ಯರು ಜೀವನ ನಡೆಸುವುದೇ ದುಸ್ತರವಾಗಿದೆ. ಇನ್ನೂ ಕೇಂದ್ರ ಸರ್ಕಾರ ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಿಸುವ ಮೂಲಕ ಸಾಮಾನ್ಯ ಜನರ ಜೀವನವನ್ನು ಕಡೆಗಣಿಸಿದೆ ಎಂದು ಪ್ರತಿಭಟನಾಕಾರರು ದೂರಿದರು.
ಜಿಲ್ಲಾಧ್ಯಕ್ಷೆ ಶ್ರೀದೇವಿ, ಜಿಲ್ಲಾಧ್ಯಕ್ಷ ವೀರಣ್ಣಗೌಡ ಮಲ್ಲಬಾದಿ, ದೇವಿಂದ್ರನಾಥ ನಾದ, ಭೀಮರಾಯ ಜಂಗಳಿ, ಲಿಂಗಪ್ಪ ಹತ್ತಿಮನಿ, ನೀಲಕಂಠರಾಯ ಎಲ್ಹೇರಿ, ಶರಣು ಅಂಬಿಗೇರ, ಶಕುಂತಲ, ಸೋನಾಬಾಯಿ, ಮಂಜುಳಾ, ಸೋನಿ, ಚನ್ನಮ್ಮ, ಚಂದ್ರಕಲಾ, ನಾಗಮ್ಮ, ವಿಜಯಲಕ್ಷ್ಮಿ, ದೇವಿಂದ್ರಮ್ಮ ಇದ್ದರು.