ಎಎಸ್‌ಐ ಉದ್ದಂಡಪ್ಪ ಆರೋಗ್ಯ ಸ್ಥಿರ ಪಿಎಸ್‌ಐ ಬಂಡೆ ಸ್ಥಿತಿ ಇನ್ನೂ ಗಂಭೀರ
ಕ.ಪ್ರ. ವಾರ್ತೆ ಗುಲ್ಬರ್ಗ ಜ.9
ಪಾತಕಿ ಮುನ್ನಾ ಬಂಧನಕ್ಕೆ ತೆರಳಿದಾಗ ನಡೆದ ಗುಂಡಿನ ಕಾಳಗದಲ್ಲಿ 2 ಗುಂಡುಗಳು ತಲೆ ಹೊಕ್ಕು ಪಾರಾಗಿದ್ದರಿಂದ ಮೆದುಳಿನ ರಕ್ತಸ್ರಾವದಿಂದಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಸ್ಟೇಷನ್ ಬಜಾರ್ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರಿಗೆ ಇಲ್ಲಿನ ಬಸವೇಶ್ವರ ಆಸ್ಪತ್ರೆ ತುರ್ತು ನಿಗಾ ಘಟಕದಿಂದ ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್‌ನ ಯಶೋಧರಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಗುರುವಾರ ಮಧ್ಯಾಹ್ನ 2 ಗಂಟೆಯಿಂದ ಬಸವೇಶ್ವರ ಆಸ್ಪತ್ರೆಯಲ್ಲಿರುವ ನರರೋಗ ವಿಭಾಗದಲ್ಲಿ ಡಾ. ಶಶಾಂಕ್ ರಾಮದುರ್ಗ ನೇತೃತ್ವದಲ್ಲಿ ಅಗತ್ಯ ತುರ್ತು ಚಿಕಿತ್ಸೆ ನೀಡಲಾಗಿತ್ತು. ಜೊತೆಗೆ ಮೆದುಳು ಹೊಕ್ಕ ಎಲುಬಿನ ಚೂರುಗಳು, ಗುಂಡಿನಿಂದಾಗಿ ಅಲ್ಲಿ ಉಂಟಾದ ಸೋಂಕು ಎಲ್ಲವನ್ನೂ ಸ್ವಚ್ಛಗೊಳಿಸಲಾಗಿತ್ತು. ಈ ಸಂದರ್ಭದಲ್ಲೇ ಬಂಡೆ ಅವರಿಗೆ ಹೆಚ್ಚಿನ ಚಿಕಿತ್ಸೆಗೆಂದು ಹೈದ್ರಾಬಾದ್‌ಗೆ ಸ್ಥಳಾಂತರಿಸುವ ಚಿಂತನೆ ಇತ್ತಾದರೂ ಬಂಡೆ ಅವರಿರುವ ಸ್ಥಿತಿಯಲ್ಲಿ ಸ್ಥಳಾಂತರ ಅಪಾಯಕಾರಿ ಎಂಬ ಅಭಿಪ್ರಾಯ ವೈದ್ಯರಿಂದ ಕೇಳಿ ಬಂದಾಗ ಆ ಚಿಂತನೆ ಕೈ ಬಿಡಲಾಗಿತ್ತು.
ಆದಾಗ್ಯೂ ಬಂಡೆ ಅವರ ರಕ್ತದೊತ್ತಡ ನಿಯಂತ್ರಣಕ್ಕೆ ಬಂದಿದ್ದರಿಂದ ಹಾಗೂ ಪ್ರಾಥಮಿಕವಾಗಿ ಯಾವ ಚಿಕಿತ್ಸೆಗಳು ಲಭ್ಯವಾಗಬೇಕಿತ್ತೋ, ಅದೆಲ್ಲವನ್ನು ಬಸವೇಶ್ವರ ಆಸ್ಪತ್ರೆ ನರರೋಗ ವಿಭಾಗದಲ್ಲಿ ವೈದ್ಯ ಡಾ. ಶಶಾಂಕ ಹಾಗೂ ಸಂತೋಷ ಇವರು ನೀಡಿದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗೆಂದು ಬೆಳಗಿನ 4 ಗಂಟೆಗೆ ಆ್ಯಂಬುಲೆನ್ಸ್‌ನಲ್ಲಿ ಹೈದ್ರಾಬಾದ್‌ಗೆ ಕರೆಯದೊಯ್ಯಲಾಗಿದೆ.
ಉದ್ದಂಡಪ್ಪ ಸಣ್ಣ ಕರುಳು ನುಂಗಿದ ಗುಂಡು: ರೋಜಾ ಠಾಣೆಯಲ್ಲಿ ಎಎಸ್‌ಐ ಆಗಿರುವ ಉದ್ದಂಡಪ್ಪ ಅವರಿಗೆ ತಗುಲಿದ್ದ ಗುಂಡು ಅವರ ಹೊಟ್ಟೆ ಛೇದಿಸಿ ಹೊಕ್ಕು ಸಣ್ಣ ಕರಳಿಗೆ ತೀವ್ರ ಗಾಯ ಮಾಡಿದೆ. ಇವರನ್ನು ಬುಧವಾರವೇ ಹೈದ್ರಾಬಾದ್‌ಗೆ ಸ್ಥಳಾಂತರಿಸಲಾಗಿತ್ತು. ಯಶೋಧರಾ ಆಸ್ಪತ್ರೆಯಲ್ಲಿ ಇವರ ಸಣ್ಣ ಕರಳಿನ ಗಾಯಕ್ಕೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಹರಿದು ಹೋಗಿರುವ ಸಣ್ಣ ಕರುಳಿನ ಭಾಗಕ್ಕೆ ನೀಡಿರುವ ಚಿಕಿತ್ಸೆಗೆ ಉದ್ದಂಡಪ್ಪ ಸ್ಪಂದಿಸುತ್ತಿದ್ದಾರೆ. ಹೀಗಾಗಿ ಉದ್ದಂಡಪ್ಪ ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದು ಹೈದ್ರಾಬಾದ್ ಯಶೋಧರಾ ಆಸ್ಪತ್ರೆ ವೈದ್ಯರ ಸಂಪರ್ಕದಲ್ಲಿರುವ ಗುಲ್ಬರ್ಗ ಪೊಲೀಸರ ಹೇಳಿಕೆಯಾಗಿದೆ.
ಪ್ರತಿಭಟನೆ- ಪ್ರಾರ್ಥನೆ- ಧರಣಿ; ರೋಜಾ ಬಡಾವಣೆಯಲ್ಲಿ ರೌಡಿ ಮುನ್ನಾ ಹಾಗೂ ಪೊಲೀಸರ ನಡುವಿನ ಗುಂಡಿನ ಕಾಳಗದ ಘಟನೆ ನಗರದಲ್ಲಿ ಹಲವು ಪ್ರತಿಭಟನೆಗಳು, ಧರಣಿ, ರ್ಯಾಲಿಗಳಿಗೆ ಕಾರಣವಾಗಿದೆ. ಐಜಿಪಿ ವಜೀರ್ ಅಹ್ಮದ್, ಜಿಲ್ಲಾ ಎಸ್ಪಿ ಅಮಿತ್ ಸಿಂಗ್ ಈ ಕಾರ್ಯಾಚರಣೆಗೆ ಬೆಂಬಲಿಸಲಿಲ್ಲ ಎಂದು ದೂರಿರುವ ಅನೇಕ ಸಂಘಟನೆಗಳವರು ತಕ್ಷಣ ಈ ಅಧಿಕಾರಿಗಳ ಬದಲಾವಣೆಗೆ ಆಗ್ರಹಿಸಿವೆ.
ಎಬಿವಿಪಿ ಕಾರ್ಯಕರ್ತರು ಮುಖ್ಯ ರಸ್ತೆಯಲ್ಲಿ ರ್ಯಾಲಿ ನಡೆಸಿ ಗುಲ್ಬರ್ಗ ಪೊಲೀಸ್ ಅಧಿಕಾರಿಗಳ ಪ್ರತಿಕೃತಿ ದಹನ ಮಾಡಿದ್ದಾರೆ. ರೋಜಾ ಬಡಾವಣೆಯಲ್ಲಿ ರೌಡಿ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆ ರೌಡಿ ಗುಂಡಿನ ದಾಳಿ ಮಾಡಿರುವ ವಿಚಾರ ಅರಿತರೂ ಪ್ರತಿದಾಳಿಗೆ ಪೊಲೀಸರನ್ನು ನಿರ್ಬಂಧಿಸಲಾಯ್ತು. ಯಾಕೆ ಹಿರಿಯ ಅಧಿಕಾರಿಗಳು ಈ ಹಂತದಲ್ಲಿ ಯಾಕೆ ಶಂಕಾಸ್ಪದವಾಗಿ ನಡೆದುಕೊಂಡರು ಎಂದು ಎಬಿವಿಪಿ ಹೋರಾಟಗಾರರು ಪ್ರಶ್ನಿಸುತ್ತ ಹಿರಿಯ ಪೊಲೀಸ್ ಅಧಿಕಾರಿಗಳ ವರ್ತನೆಯೇ ಸಂಶಯಗಳಿಗೆ ಕಾರಣವಾಗಿದೆ ಎಂದೂ ದೂರಿದ್ದಾರೆ.
ಗುಲ್ಬರ್ಗ ನಗರದಲ್ಲಿ ಅನೇಕ ರೌಡಿಗಳ ಗ್ಯಾಂಗ್ ಕಾರ್ಯತತ್ಪರವಾಗಿದ್ದರೂ, ಪೊಲೀಸರು ಅವುಗಳನ್ನು ಮಟ್ಟಹಾಕಲು ಕ್ರಮ ಜರುಗಿಸದೆ ಮೌನವಾಗಿದ್ದಾರೆ ಎಂದು ಎಬಿವಿಪಿ ಕಾಯಕರ್ತರಾದ ಭಾಗಣ್ಣ ಹೂತಿನಮಡು, ವಿದ್ಯಾನಂದ ಕಾಂಬಳೆ, ಆಂದ ಕುಸನೂರ್, ರೇವಣಸಿದ್ದ, ಅರುಣ ಪಾಟೀಲ್ ಮೊದಲಾದವರರು ಟೀಕಿಸಿದ್ದಾರೆ.
ಶರಣಬಸವೇಶ್ವರ ಮಂದಿರಕ್ಕೆ ತೆರಳಿ ಪ್ರಾರ್ಥನೆ: ಕಾಳಗದಲ್ಲಿ ಗಾಯಗೊಂಡು ಕೋಮಾದಲ್ಲಿರುವ ಪಿಎಸ್‌ಐ ಬಂಡೆ, ಉದ್ದಂಡಪ್ಪ, ಮುರಳಿ ಇವರೆಲ್ಲರು ಶೀಘ್ರ ಗುಣಮುಖರಾಗಲಿ ಎಂದು ಇಲ್ಲಿನ ಶಿವಾಜಿ ನಗರದಲ್ಲಿರುವ ಯುವಕರೆಲ್ಲರೂ ಕೂಡಿಕೊಂಡು ತಮ್ಮ ಬಡಾವಣೆಯಿಂದ ಶರಣಬಸವೇಶ್ವರ ಮಂದಿರದವರೆಗೂ ಪಾದಯಾತ್ರೆ ನಡೆಸಿ ಗಮನ ಸೆಳೆದರು. ಸಂಗಮೇಶ ಹುಡಗಿ ನೇತೃತ್ವದಲ್ಲಿ ಯುವಕರಾದ ಪ್ರಭಾಕರ, ರಾಜು, ಮಂಜುನಾಥ, ಶರಣಯ್ಯ, ಶರಣು, ನಾಗರಾಜ, ಸಿದ್ದು ಸ್ವಾಮಿ, ಶರಣು ಪೇಂಟರ್, ಸಂತೋಷ ಸಂಗೋಳಗಿ, ಸಿದ್ದು ಪೂಜಾರಿ, ಶರಣು ಜಮಾದಾರ್ ಸೇರಿದಂತೆ ನೂರಾರು ಯುವಕರು ಪಾದಯಾತ್ರೆ- ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.
ಸ್ಪಂದಿಸಿದ ಆಸ್ಪತ್ರೆ: ಪೊಲೀಸ್ ಕಾಳಗದಲ್ಲಿ ಗಾಯಗೊಂಡ ಪಿಐ ಬಂಡೆ, ಮುರಳಿ, ಉದ್ದಂಡಪ್ಪ ಮಧ್ಯಾಹ್ನ 2 ಗಂಟೆ ಸುಮಾರಿಗೆ ತೀವ್ರ ರಕ್ತಸ್ರಾವದೊಂದಿಗೆ ಆಸ್ಪತ್ರೆಗೆ ಬಂದಾಗ ಅಲ್ಲಿ ಲಗುಬಗೆಯಿಂದ ಎಲ್ಲಾ ವಿಭಾಗಗಳಿಂದಲೂ ಸ್ಪಂದನೆ ವ್ಯಕ್ತವಾಯ್ತಲ್ಲದೆ ಸುದ್ದಿ ತಿಳಿದ ತಕ್ಷಣ ಬಸವೇಶ್ವರ ಆಸ್ಪತ್ರೆ ಡೀನ್ ಡಾ. ಶರಣಬಸಪ್ಪ ಹರವಾಳ ತಕ್ಷಣ ಆಸ್ಪತ್ರೆಗೆ ಧಾವಿಸಿ ಗಾಯಾಳು ಪೊಲೀಸ್ ಅಧಿಕಾರಿಗಳಿಗೆ ತಕ್ಷಣ ಲಭ್ಯವಿರುವ ಎಲ್ಲಾ ಚಿಕಿತ್ಸೆಗಳು ದೊರಕಲು ಸೂಕ್ತ ವ್ಯವಸ್ಥೆ ಮಾಡಿ, ಇಡೀ ಪ್ರಕರಣದ ಸಂಪೂರ್ಣ ಉಸ್ತುವಾರಿ ಹೊಣೆ ಹೊತ್ತು ಆಸ್ಪತ್ರೆಯಲ್ಲೇ ವಾಸ್ತವ್ಯ ಮಾಡಿದರು. ಸಮಯಕ್ಕೆ ಸರಿಯಾಗಿ ಲಭ್ಯ ಚಿಕಿತ್ಸೆಗಳನ್ನು ಮಾಡಿದ್ದು ಸರ್ವರ ಮೆಚ್ಚುಗೆಗೆ ಪಾತ್ರವಾಗಿದೆ.
ನರರೋಗ ವಿಭಾಗದಲ್ಲಿನ ಡಾ. ಶಶಾಂಕ ರಾಮದುರ್ಗ, ಡಾ. ಸಂತೋಷ ಮಂಗಶೆಟ್ಟಿ ಹಾಗೂ ಅವರ ತಂಡದವರು ತಕ್ಷಣ ಸ್ಪಂದಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ತುರ್ತು ಪ್ರಾಥಮಿಕ ಚಿಕಿತ್ಸೆ ನೀಡಿದ್ದರಿಂದ ಅವರನ್ನೆಲ್ಲ ಹೈದ್ರಾಬಾದ್‌ಗೆ ಸ್ಥಳಾಂತರಿಸಲು ಅನುಕೂಲವಾದಂತಾಯ್ತು.