ಐಜಿಪಿ ಅಮಾನತಿಗೆ, ಉಸ್ತುವಾರಿ ಸಚಿವರ ರಾಜಿನಾಮೆಗೆ ಆಗ್ರಹ
ಶಹಾಪುರ: ಗುಲ್ಬರ್ಗ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಖಮುರುಲ್ ಇಸ್ಲಾಂರ ಬೇಜವಾಬ್ದಾರಿತನವೇ ಕಾರಣ. ಐಜಿಪಿ ವಜೀರ ಅಹ್ಮದ್ ರೌಡಿಗಳ ಮಟ್ಟ ಹಾಕುವಲ್ಲಿ ವಿಫಲರಾಗಿದ್ದಾರೆ ಎಂದು ತಾಲೂಕ ಎಬಿವಿಪಿ ಸಂಘಟನೆಯ ಕಾರ್ಯದರ್ಶಿ ಅರವಿಂದ ಉಪ್ಪಿನ್ ಆರೋಪಿಸಿದ್ದಾರೆ. ಈಶಾನ್ಯ ವಲಯದ ಐಜಿಪಿ ವಜೀರ ಅಹಮದ್ ಅವರನ್ನ ಅಮಾನತು ಮಾಡಬೇಕು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಖಮುರುಲ್ ಇಸ್ಲಾಂ ರಾಜನಾಮೆ ನೀಡಬೇಕೆಂದು ಒತ್ತಾಯಿಸಿ ಗುರುವಾರ ತಾಲೂಕ ಎಬಿವಿಪಿ ಸಂಘಟನೆಯ ಕಾರ್ಯಕರ್ತರು ಇಲ್ಲಿನ ತಾಲೂಕ ದಂಡಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಹಾಡು ಹಗಲೇ ರೌಡಿಯೊಬ್ಬ ಪೋಲಿಸರ ಮೇಲೆ ಗುಂಡು ಹಾರಿಸುವುದು ಎಂದರೆ ಸಾಮಾನ್ಯವೇ. ಹಾಗಾದರೆ ಜನಸಾಮಾನ್ಯರ ಗತಿಯೇನು ಎಂದು ಕಾರ್ಯಕರ್ತರು ಆಡಳಿತಾಧಿಕಾರಿಗೆ ಪ್ರಶ್ನಿಸಿದರು. ರೌಡಿ ಮುನ್ನಾನ ಸಹಚರರನ್ನ ಪತ್ತೆ ಹಚ್ಚಿ ವಿಚಾರಣೆಗೆ ಒಳಪಡಿಸಿ ಪ್ರಕರಣಗಳನ್ನ ಹೊರ ತರಬೇಕಾಗಿದೆ ಎಂದರು. ಕೂಡಲೇ ಸಂಬಂಧಿಸಿದ ಮೇಲಾಧಿಕಾರಿಗಳು ರೌಡಿಗಳನ್ನ ಮಟ್ಟ ಹಾಕಿ ಸುವ್ಯವಸ್ಥೆ ಕಾಪಾಡಬೇಕೆಂದು ಆಗ್ರಹಿಸಿದರು.