ಕಾಲೇಜುಗಳ ಶುಲ್ಕ ಏರಿಕೆ ಆದೇಶ ವಿರೋಧಿಸಿ ಪ್ರತಿಭಟನೆ
ಶಹಾಪುರ: ರಾಜ್ಯದ ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳ ಶುಲ್ಕ ಶೇ.20 ರಷ್ಟು ಏರಿಸಿ ಆದೇಶ ಹೊರಡಿಸಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ತೀವ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಮಾಡಿತು.
ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಶೇ.20 ರಷ್ಟು ಶುಲ್ಕ ಏರಿಕೆ ಮಾಡಿ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಶಿಕ್ಷಣದ ವ್ಯಾಪರೀಕರಣದ ಮುಖವಾಡ ಬಹಿರಂಗ ಪಡಿಸಿದೆ. ಹಿಂದೆ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ) 2006 ಕಾಯ್ದೆ ಜಾರಿಮಾಡಲು ಹೊರಟಾಗ ರಾಜ್ಯಾದ್ಯಂತ ಎಸ್‌ಎಫ್‌ಐ ಪ್ರತಿಭಟನೆಯಿಂದ ಅದನ್ನು ತಡೆ ಹಿಡಿಯಿತು. ಆದರೆ ಈ ಕಾಯ್ದೆ ಜಾರಿಗೆ ಬಾರದ ಕಾರಣ ರಾಜ್ಯ ಕಾಂಗ್ರೆಸ್ ಸರ್ಕಾರ ಹಣದ ಆಸೆಗಾಗಿ ಈಗ ಪದವಿಪೂರ್ವ ವಿದ್ಯಾರ್ಥಿಗಳಿಂದ ಶುಲ್ಕದ ಮೂಲಕ ಹಣ ವಸೂಲಿ ದಂಧೆಗೆ ಮುಂದಾಗಿದೆ. ಇದರಿಂದ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ರಾಜ್ಯ ಸರ್ಕಾರದ ಮೇಲಿರುವ ನಿರೀಕ್ಷೆ ಹುಸಿಯಾಗಿದೆ ಎಂದು ಎಸ್‌ಎಫ್‌ಐ ತಾಲೂಕಾಧ್ಯಕ್ಷ ಹೊನ್ನಪ್ಪ ಹೋತಪೇಟೆ ಅಸಮಾದಾನ ವ್ಯಕ್ತಪಡಿಸಿದರು.
ವಿವಿಧ ಶುಲ್ಕ ಸೇರಿ 3.732 ಇರುವ ಶುಲ್ಕವನ್ನು 4.485ಕ್ಕೆ ಹೆಚ್ಚಿಸಲಾಗಿದ್ದು, ತಕ್ಷಣವೇ ಆದೇಶ ವಾಪಾಸ್ ಪಡೆಯಬೇಕೆಂದು ಮನವಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಸವರಾಜ ನಾಟೇಕರ, ಸದಸ್ಯ ಸೊಪಣ್ಣ ಸಗರ, ರಮೇಶ ಪಟ್ಟೆದಾರ, ಪರಶುರಾಮ ಸಗರ, ಹೊನ್ನಪ್ಪ ಮಾನ್ಪಡೆ, ಹಣಮಂತ್ರಾಯ ಶೇಖಸಿಂದಿ, ಚಂದ್ರಶೇಖರ ಚಾಮನಾಳ ಇತರರು ಇದ್ದರು.