ತಾಂಡಾದಲ್ಲಿ ಕುಡಿವ ನೀರಿನ ಬವಣೆ
ಶಹಾಪುರ: ಮತಕ್ಷೇತ್ರದ ಏವೂರ ಸೇವಾಲಾಲ್ ನಗರ ತಾಂಡಾದಲ್ಲಿ ಕಳೆದ 15 ದಿನಗಳಿಂದ ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ. ಇರುವ ಟ್ಯಾಂಕಿಗೆ ನೀರು ಸರಬರಾಜು ಮಾಡುವ ಪಂಪ್‌ಸೆಟ್ ಸುಟ್ಟರು ಸಂಬಂಧಿಸಿದ ಗ್ರಾಮಪಂಚಾಯ್ತಿ ಕಂಡು ಕಾಣದಂತಿದ್ದು ತಾಂಡಾದ ಜನರ ಭವಣೆ ನೀಗದಂತಾಗಿದೆ ಎಂದು ತಾಂಡಾದ ತುಳಜಾರಾಮ, ಶಿವರಾಮ ಚವ್ಹಾಣ, ಕಿಶನಚವ್ಹಾಣ ಸಂಬಂಧಿಸಿದ ಅಧಿಕಾರಿಗಳಿಗೆ ಗ್ರಾಮದ ಪರಿಸ್ಥಿತಿಯ ಬಗ್ಗೆ ದೂರು ಸಲ್ಲಿಸಿದ್ದಾರೆ.
ಕೈಗೆ ಸಿಗದ ಪಿಡಿಒ: ಗ್ರಾಪಂ ಅಭಿವೃದ್ಧಿ ಅಧಿಕಾರಿ ಖಾತ್ರಿ ಕಾರ್ಯದಲ್ಲಿ ಸಂಪೂರ್ಣ ಮಗ್ನರಾಗಿದ್ದು, ಅವರನ್ನು ಸಂಪರ್ಕಿಸಲು ಜಿಲ್ಲಾ ಕೇಂದ್ರ ಸ್ಥಾನಕ್ಕೆ ಹೋಗುವ ಸ್ಥಿತಿ ಬಂದಿದೆ. ಗ್ರಾಮದ, ತಾಂಡಾಗಳ ಸ್ಥಿತಿಗಳ ಬಗ್ಗೆ ಗಮನ ನೀಡುತ್ತಿಲ್ಲ. 15 ದಿನಗಳಿಂದ ನೀರಿಲ್ಲದಿದ್ದರೂ ಪಿಡಿಒಗೆ ಮಾಹಿತಿ ನೀಡುವುದೇ ದೊಡ್ಡಕೆಲಸವಾಗಿದ್ದು ಸಮಸ್ಯೆಗಳಿದ್ದಾಗ ಕೈಗೆ ಸಿಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪುನಶ್ಚೇತನ ಹೆಸರಲ್ಲಿ 5 ಲಕ್ಷ ಕಾಮಗಾರಿ: ಸಕಾಲದಲ್ಲಿ ತಾಂಡಕ್ಕೆ ನೀರು ಸರಬರಾಜು ಮಾಡುವುದಕ್ಕೆ ಪಂಚಾಯ್ತಿ ನಿರ್ಲಕ್ಷ್ಯ ವಹಿಸುತ್ತಿದ್ದುದರ ಬೆನ್ನಲ್ಲೆ ಪುನಶ್ಚೇತನ ಕಾಮಗಾರಿ ಅಡಿಯಲ್ಲಿ ಸರ್ಕಾರ 5 ಲಕ್ಷ ನೀರು ನಿರ್ವಹಣೆಯ ಕಾಮಗಾರಿ ಅನುಷ್ಠಾನಗೊಳಿಸಿದ್ದು, ಅದ್ಯಾವ ರೀತಿ ಪುನಶ್ಚೇತನವಾಗುತ್ತದೆಯೋ ತಿಳಿಯದಾಗಿದೆ ಎಂದು ತುಳಜಾರಾಮ ಅಚ್ಚರಿ ವ್ಯಕ್ತಪಡಿಸಿ ತಾಂಡಾದ ಸಮಸ್ಯೆಗಳ ಬಗ್ಗೆ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.