ಹುಣಸಗಿಯಲ್ಲಿ ಶಾಸಕ ಆರ್ವಿ ನಾಯಕ್ ದೇವರಲ್ಲಿ ಪ್ರಾರ್ಥನೆ
ಹುಣಸಗಿ: ಅಂಗವಿಕಲರಿಗೆ ಮುಂದಿನ ಜನ್ಮ ಅಂತಾ ಇದ್ದರೆ, ಯಾವುದೇ ನ್ಯೂನತೆಗಳಿಲ್ಲದೇ ಹುಟ್ಟಿಸು ದೇವರೆ ಎಂದು ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ್ ಪ್ರಾರ್ಥಿಸಿದರು.
ಪಟ್ಟಣದ ಗ್ರಾಪಂ ಆವರಣದಲ್ಲಿ ಅಖಿಲ ಕರ್ನಾಟಕ ಹೋರಾಟ ಸಮಿತಿ ವಿಶೇಷ ತಾಲೂಕಾ ಘಟಕ ಹುಣಸಗಿಯ ವತಿಯಿಂದ ನಡೆದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಮಾತನಾಡಿ, ಅಂಗವಿಕಲರು ಕ್ರೀಡೆ, ಸಾಹಿತ್ಯ, ಸಂಗೀತ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಾಮಾನ್ಯ ವ್ಯಕ್ತಿಗಿಂತ ಅವರ ಸಾಧನೆ ಕಡಿಮೆಯೇನು ಇಲ್ಲ. ಅವರುಗಳು ಎಲ್ಲಾ ಕ್ಷೇತ್ರಗಳಲ್ಲಿ ಬಲಿಷ್ಠರಾಗಿದ್ದಾರೆ. ಪಾಲಕರು ತಪ್ಪದೇ ತಮ್ಮ ಮಗೂವಿಗೆ ಪೋಲಿಯೋ ಲಸಿಕೆ ಹಾಕಿಸಿ ಆರೋಗ್ಯದ ಸುರಕ್ಷತೆಯನ್ನು ಕಾಪಾಡಿರಿ.
ಪರಿಹಾರ ಕಂಡುಕೊಳ್ಳಿ: ಯಾವುದೇ ಗ್ರಾಪಂ.ಗಳಲ್ಲಿ ಅಂಗವಿಕಲರಿಗೆ ಸೌಲಭ್ಯಗಳು ಸರಿಯಾಗಿ ಸಿಗದೇ ಹೋದಲ್ಲಿ ತಕ್ಷಣ ತಮ್ಮನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ ಎಂದು ತಿಳಿಸಿದರು. ಅಂಗವಿಕಲರಿಗಾಗಿ ನೂತನ ಭವನವನ್ನು ನಿರ್ಮಿಸಿ ಕೊಡಬೇಕೆಂದು ಸಂಘದವರಿಂದ ಮನವಿ ಮಾಡಲಾಗಿತ್ತು. ಈ ವರ್ಷದಿಂದಲೇ ಮೋಟಾರ್ ಸೈಕಲ್‌ಗಳನ್ನು ನೀಡುವುದಾಗಿ ತಿಳಿಸಿದರು.
ವರ ಎಂದು ಭಾವಿಸಿ: ಆಶೀರ್ವಚನ ನೀಡಿದ ಗುಳಬಾಳ ಮರಿಹುಚ್ಚೇಶ್ವರ ಶ್ರೀ, ಅಂಗವಿಕಲತೆ ದೇವರು ಕೊಟ್ಟ ಶಾಪವಲ್ಲ. ಅದು ವರ ಎಂದು ಭಾವಿಸಿದಾಗ ಸಾಧನೆ ಮಾಡಲು ಸಾಧ್ಯ. ಪ್ರತಿಯೊಬ್ಬರು ವಿದ್ಯಾವಂತರಾಗಬೇಕು. ಸಮಾಜದಲ್ಲಿ ಗುರುತಿಸಿಕೊಳ್ಳುವಂತಹ ವ್ಯಕ್ತಿಗಳಾಗಬೇಕೆಂದು ಆಶೀರ್ವಚನ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್, ಗ್ರಾಪಂ ಅಧ್ಯಕ್ಷ ಸುರೇಶ ನೀರಲಗಿ, ಹುಣಸಗಿ ವಿಶೇಷ ತಹಶೀಲ್ದಾರ್ ಬಸವರಾಜ ಅಂಬರಶೆಟ್ಟಿ ಇತರರು ಮಾತನಾಡಿದರು. ಅಖಿಲ ಕರ್ನಾಟಕ ಅಂಗವಿಕಲರ ಸಂಘದ ಜಿಲ್ಲಾಧ್ಯಕ್ಷ ಸಂಗನಗೌಡ ಧನರಡ್ಡಿ ಮನವಿ ಪತ್ರವನ್ನು ಶಾಸಕರಿಗೆ ನೀಡಿ, ವರದಿ ಓದಿದರು.
ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ಮುಖಂಡರಾದ ಸೂಲಪ್ಪ ಕಮತಗಿ, ನಾನಾಗೌಡ ಪಾಟೀಲ್, ರೇವಡಿ, ಬಸವರಾಜ ಸಜ್ಜನ್, ಅಲ್ಲಿ ಮೇಸ್ತ್ರಿ, ಕೊಡೇಕಲ್ ಉಪ ತಹಸೀಲ್ದಾರ್ ಮಹಾದೇವಪ್ಪ ಪಾಟೀಲ್, ಚಂದ್ರಶೇಖರ ಸಜ್ಜನ್, ಬಸವರಾಜ ವೈಲಿ, ಚಂದ್ರಶೇಖರ ಮೇಲಿನಮನಿ, ಗವಿಸಿದ್ದಯ್ಯಸ್ವಾಮಿ, ಬಸವರಾಜ ಮಿಲ್ಟ್ರಿ, ಸೂಗಪ್ಪ ಚಂದಾ, ಮಹಾಂತೇಶ ಮಲಗಲದಿನ್ನಿ ಸೇರಿದಂತೆ ಇತರರು ಇದ್ದರು. ಆನಂದ ಬಾರಿಗಿಡದ ನಿರೂಪಿಸಿ, ಹುಣಸಗಿ ಅಧ್ಯಕ್ಷ ಗುರು ಗುತ್ತೇದಾರ ಸ್ವಾಗತಿಸಿ ವಂದಿಸಿದರು.