ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

35 ಕುರಿ, ಮೂವರ ದುರ್ಮರಣ

Lingaraj Badiger
Updated On : 11 Jan 2014, 11:48 am

ಕನ್ನಡಪ್ರಭ ವಾರ್ತೆ  ಶಹಾಪುರ  ಜ.10
ಲಾರಿ ಚಾಲಕನ ಅಜಾಗರೂಕತೆಯಿಂದ ಮೂವರು ಕುರಿಗಾಹಿಗಳು ಸೇರಿದಂತೆ 35 ಕುರಿಗಳ ಮೇಲೆ ಲಾರಿ ಹರಿದು ಸಾವನ್ನಪ್ಪಿದ ದಾರುಣ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮದ್ರಕಿ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಮಧ್ಯರಾತ್ರಿ ಸುಮಾರು 1.30 ಗಂಟೆಗೆ ಜರುಗಿದೆ.
  35 ಕುರಿಗಳು ಮತ್ತು ಕುರಿಗಾಹಿ ನಿಂಗಪ್ಪ ನಾಗಪ್ಪ(35), ಯಂಕಪ್ಪ ನಾಗಪ್ಪ(30) ಮಡಿವಾಳಪ್ಪ ಸಂಗನಬಸಪ್ಪ(45) ಮೇಲೆ ಲಾರಿ ಹರಿದು ದಾರುಣವಾಗಿ ಸಾವನ್ನಪ್ಪಿದವರು.
ಬೆಲೆ ಕಟ್ಟದಷ್ಟು ಹಾನಿ: 35 ಕುರಿಗಳು ಸ್ಥಳದಲ್ಲಿ ಸತ್ತಿದ್ದು ಇನ್ನು ಐದಾರು ಕುರಿಗಳು ವಿಪರೀತ ಗಾಯಗೊಂಡಿವೆ. ಇದರ ಜೊತೆಗೆ ಸಂಸಾರದ ಭಾರವನ್ನು ಹೊತ್ತಿದ್ದ ಮೂವರ ಸಾವು ಬೆಲೆ ಕಟ್ಟಲಾರದಷ್ಟಿದ್ದು, ಕುರಿಗಳದ್ದೇ ಅಂದಾಜು 15 ಲಕ್ಷದಷ್ಟು ಹಾನಿಯಾಗಿದೆ. ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪಶು ವೈದ್ಯರು ಪಂಚನಾಮೆ ನಡೆಸಿ ಸತ್ತ ಕುರಿಗಳನ್ನು ಪೊಲೀಸರ ಸಮಕ್ಷಮದಲ್ಲಿ ಜೆಸಿಬಿ ಮೂಲಕ ಮಣ್ಣು ಮುಚ್ಚಿಸಲಾಗಿದೆ.
 'ಕುರಿಗಳನ್ನು ಹೊಲಕ್ಕೆ ಹಚ್ಚಿ ಹೊಂದಿಕಿಮಾಡಿ ಬರ್ತೀವಿ ಅಂತ ಹೋದವರಿಗೆ ಎಂಥ ದುರ್ಗತಿ ಬಂತೋ ಯಪ್ಪಾ... ನಮಗ ಸಂಕ್ರಮಣ ಸುಖ ಮಾಡ್ಲಿಲ್ಲ, ಬಂಗಾರದಂಥ ಜೀವನ ಕಳಕೊಂಡವಿ' ಎಂದು ಸರ್ಕಾರಿ ಆಸ್ಪತ್ರೆ ಮುಂದೆ ಬೆಳಗಿನ ಜಾವದಲ್ಲಿಯೇ ಸಂಸಾರದ ನೊಗ ಹೊತ್ತವರನ್ನು ಕಳೆದುಕೊಂಡ ಬಂಧುಗಳ ಆಕ್ರಂದನ ಎಂಥವರ ಮನ ಕುಲಕುವಂಥ ವಾತಾವರಣ ನಿರ್ಮಾಣವಾಗಿತ್ತು.
ಘಟನೆ ವಿವರ: ಸದ್ಯದ ಸ್ಥಿತಿಯಲ್ಲಿ ಅಲ್ಲಲ್ಲಿ ಹೊಲಗಳಲ್ಲಿ ರಾಶಿ ಸಂದರ್ಭವಿದ್ದು. ಹೊಲಗಳಲ್ಲಿ ತಿಂಗಳುಗಟ್ಟಲೇ ಕುರಿಗಳನ್ನು ಬಿಡುವುದು(ತರುಬುವುದು). ಅದರಿಂದ ಬಂದ ನಿಗದಿತ ಹಣ, ದವಸ ಧಾನ್ಯದಿಂದ ಸಂಸಾರ ನಿರ್ವಹಣೆಗೆ ಅನುಕೂಲ.
  ಇದು ಬದುಕು ಅರಸಿ ಹೊರಡುವ ಕುರಿಗಾಹಿಗಳ ಕಾಯಕ ಎಂದಿನಂತೆ ತಾಲೂಕಿನ ದಿಗ್ಗಿ ಸೈದಾಪುರ ಗ್ರಾಮದಿಂದ ಅಂದಾಜು 600 ಕುರಿಗಳೊಂದಿಗೆ ಫರಹತಾಬಾದ್ ಗ್ರಾಮಕ್ಕೆ ಜ.9ರಂದು ರಾತ್ರಿ 10 ಗಂಟೆ ಸುಮಾರಿಗೆ ಏಳೆಂಟು ಕುರಿಗಾಹಿಗಳು ಹೊರಟಿದ್ದಾರೆ. ಸುಮಾರು 1.30ರ ಮಧ್ಯರಾತ್ರಿ ಮದ್ರಿಕಿ ಗ್ರಾಮದ ಬಳಿ ರಭಸದಿಂದ ಬಂದ ಲಾರಿಯೊಂದು ಅಡ್ಡಾದಿಡ್ಡಿ ಚಲಿಸುತ್ತಾ ನೋಡುವುದರೊಳಗಾಗಿ ಇಡೀ ರಸ್ತೆ ರಕ್ತದಮಡುವಿನಲ್ಲಿ ತುಂಬಿ ಹೋಗಿತ್ತು.
  ಈ ಕುರಿತು ಪ್ರತ್ಯಕ್ಷದರ್ಶಿ, ಅವರ ಜೊತೆಗಿದ್ದ ಮಹಾದೇವಪ್ಪ ಹೇಳುವಂತೆ, 'ಅತಿಯಾದ ವೇಗದಿಂದ ಬಂದ ಲಾರಿ ರಸ್ತೆಯ ಮಧ್ಯ ಬಂದು ನಮ್ಮವರನ್ನು ಲುಕಸಾನ ಮಾಡಿದ್ದು ಬಂದು ಬಳಗ ಆ್ಯಂಬ್ಯುಲೆನ್ಸ್‌ಗೆ ಫೋನ್ ಮಾಡದರಾಗ ಎಲ್ಲ ಕತಿ ಮುಗದಿತ್ತರಿ' ಎಂದು ಬಿಕ್ಕಳಿಸುತ್ತ ಕಣ್ಮುಂದೆ ನಡೆದ ಘಟನೆಯ ಬಗ್ಗೆ ಗಾಬರಿಗೊಂಡಿದ್ದು ಕಂಡುಬರುತ್ತಿತ್ತು.
ಧಾವಿಸಿ ಬಂದ ಗ್ರಾಮಸ್ಥರು: ನಸುಕಿನಲ್ಲಿಯೇ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ, ದಿಗ್ಗಿ ಸೈದಾಪುರ ಗ್ರಾಮಸ್ಥರು ಆಸ್ಪತ್ರೆಗೆ ಬಂದು ನಡೆದು ದುಃಖತಪ್ತರಿಗೆ ಸಾಂತ್ವನ ಹೇಳುತ್ತಿದ್ದರು. ಪ್ರಮುಖರಾದ ಬಸವರಾಜಪ್ಪಗೌಡ ದರ್ಶನಾಪುರ, ಶರಣಪ್ಪ ಸಲಾದಪುರ, ಮರಿಗೌಡ ಹುಲಕಲ್, ಡಾ.ಚಂದ್ರಶೇಖರ ಸುಬೇದಾರ, ಬಸವರಾಜ 1ವಿಭೂತಿಹಳ್ಳಿ, ಶಿವಮಹಾಂತ ಚಂದಾಪುರ, ರಾಜುಗೌಡ ಉಕ್ಕಿನಾಳ ಆಕಸ್ಮಿಕ ಘಟನೆಯ ಬಗ್ಗೆ ಮರುಕ ವ್ಯಕ್ತಪಡಿಸಿದರು.
ನಿದ್ರೆ ಮಂಪರು ಅಥವಾ ಮದ್ಯ ಸೇವನೆ ಅನಾಹುತಕ್ಕೆ ಕಾರಣ?: ವಾಹನ ಸವಾರರು ರಾತ್ರಿ ವೇಳೆಯಲ್ಲಿ ಅಥವಾ ನಿದ್ರೆ ಮಂಪರಿನಲ್ಲಿ ವಾಹನ ಚಲಿಸುವುದು ಇಂಥ ಅವಘಡಗಳಿಗೆ ಕಾರಣವಾಗುತ್ತಿವೆ. ಮಧ್ಯ ರಾತ್ರಿಯಲ್ಲಿ ರಾಜ್ಯ ಹೆದ್ದಾರಿಗುಂಟ ಕುರಿಗಳನ್ನು ತೆಗೆದುಕೊಂಡು ಹೋಗುವಂಥ ಅವಸರವಾದರೂ ಏನಿತ್ತು  ಎಂಬುವುದು ಎಲ್ಲರಲ್ಲಿ ಕಾಡುವ ಪ್ರಶ್ನೆಯಾಗಿದೆ. ಮೃತಪಟ್ಟ ದುರ್ದೈವಿಗಳಲ್ಲಿ ಯಂಕಪ್ಪ ನಾಗಪ್ಪ ಇತ್ತೀಚಿಗಷ್ಟೆ ಮದುವೆಯಾಗಿದ್ದ. ಇನ್ನೊಬ್ಬ ಮಡಿವಾಳಪ್ಪ ಸಂಗನಬಸಪ್ಪ ಇವರೊಂದಿಗೆ ಕೂಲಿ ಕೆಲಸದ ಮೇಲೆ ಹೋಗುತ್ತಿದ್ದ ಎನ್ನಲಾಗಿದೆ.
ತಪಾಸಣೆ ಕಡ್ಡಾಯವಾಗಿದೆಯೇ: ದಿನನಿತ್ಯ ರಾತ್ರಿ ವೇಳೆ ಸಂಚರಿಸುವ ವಾಹನಗಳ ನೋಂದಣಿಯಾಗಲಿ ಅಥವಾ ತಪಾಸಣೆಯಾಗಲಿ ನಡೆಯುತ್ತಿದೆಯೇ ಎಂಬುದು ಇಂಥ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗುತ್ತದೆ. ಕೆಲವರು ಮನಬಂದಂತೆ ವಾಹನ ನಡೆಸುವವರಿಗೆ ಕಡಿವಾಣ ಹಾಕಲು ತಪಾಸಣೆ ಮುಖ್ಯವಾಗಿದೆ. ಭೀಮರಾಯನಗುಡಿ ಚೆಕ್‌ಪೋಸ್ಟ್, ಶಹಾಪುರ ಚೌಕದಲ್ಲಿ ತಪಾಸಣೆ ಕಾರ್ಯ ಚುರುಕಾಗಿದ್ದರೆ ರಾತ್ರಿ ನಡೆದ ಅಪಘಾತಗಳನ್ನು, ವಾಹನ ಚಾಲಕರನ್ನು ಪತ್ತೆ ಹಚ್ಚಲು ಹೆಚ್ಚು ಸಹಕಾರಿಯಾಗುತ್ತದೆ. ಈ ದಿಸೆಯಲ್ಲಿ ಪೊಲೀಸ್ ಇಲಾಖೆ ಹೆಚ್ಚು ಜಾಗೃತವಾಗಿರುವುದು ಅವಶ್ಯಕವಾಗಿದ್ದು, ಅಪಘಾತ ಮಾಡಿ ಪಾರಾದ ವಾಹನವನ್ನು ಶೀಘ್ರ ಪತ್ತೆ ಹಚ್ಚಬೇಕು ಎಂದು ಜೆಡಿಎಸ್ ಮುಖಂಡ ಶರಣಪ್ಪ ಸಲಾದಪುರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement