ಎಪಿಎಂಸಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ
ಯಾದಗಿರಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿದ್ದ ಭೀಮಣ್ಣಗೌಡ ಕ್ಯಾತನಾಳ ವಿರುದ್ಧ ಸದಸ್ಯರು ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಜಯವಾಗಿದೆ.
ಶುಕ್ರವಾರ ನಡೆದ ಎಪಿಎಂಸಿ ಉಪಾಧ್ಯಕ್ಷೆ ತಿಮ್ಮವ್ವ ನಾಯಕ ಯಡ್ಡಳ್ಳಿ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಸರ್ಕಾರದಿಂದ ನಾಮ ನಿರ್ದೇಶನಗೊಂಡ 3 ಜನ ಸದಸ್ಯರು ಸೇರಿ ಒಟ್ಟು 17 ಸದಸ್ಯರ ಪೈಕಿ 12 ಜನ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಅವಿಶ್ವಾಸ ನಿರ್ಣಯ ಪರ ಕೈ ಎತ್ತುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಉಳಿದ 5 ಜನ ಸದಸ್ಯರು ಗೈರು ಆಗಿದ್ದರು.
ನಂತರ ಮಾತನಾಡಿದ ಸದಸ್ಯರಾದ ಸಿದ್ದಪ್ಪ ಹೊಟ್ಟಿ ಹಾಗೂ ಮಲ್ಲಣ್ಣ ಜೈಗ್ರಾಂ, ಅಧ್ಯಕ್ಷರಾಗಿದ್ದ ಕ್ಯಾತನಾಳ ಅವರು ತಮ್ಮ ಅವಧಿಯಲ್ಲಿ ಎಲ್ಲಾ ಸದಸ್ಯರ ಅಭಿಪ್ರಾಯ ಪಡೆಯದೆ ಏಕಪಕ್ಷಿಯ ನಿರ್ಧಾರ ಕೈಗೊಳ್ಳುತ್ತಿದ್ದರು. ಅವರ ಕಾರ್ಯ ವೈಖರಿ ಸದಸ್ಯರ ಅಸಮಧಾನಕ್ಕೆ ಕಾರಣವಾಗಿ ಅವಿಶ್ವಾಸ ಮಂಡಿಸುವ ಮೂಲಕ ಅವರನ್ನು ಸ್ಥಾನದಿಂದ ಪದಚ್ಯುತಿಗೊಳಿಸಲಾಯಿತು ಎಂದು ತಿಳಿಸಿದರು.