ಏಕತಾ ಪ್ರತಿಮೆ ನಿರ್ಮಾಣಕ್ಕೆ ಲೋಹ ನೀಡಲು ಮನವಿ
ಯಾದಗಿರಿ: ದೇಶದ ಸ್ವಾತಂತ್ರ ನಂತರ ಎಲ್ಲ ಸಂಸ್ಥಾನಗಳನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಾಜಿ ಉಪ ಪ್ರಧಾನಿ ಹಾಗೂ ಗೃಹ ಸಚಿವರಾಗಿದ್ದ ಸರ್ದಾರ ವಲ್ಲಭಾಬಾಯಿ ಪಟೇಲ್ ಅವರ ಏಕತಾ ಪ್ರತಿಮೆ ನಿರ್ಮಾಣಕ್ಕೆ ಜಿಲ್ಲಾ ರೈತರು ಲೋಹ ನೀಡಬೇಕೆಂದು ಸಮಿತಿ ರಾಜ್ಯ ಸಂಚಾಲಕ ಶಂಕರನಾರಾಯಣ ರಡ್ಡಿ ಮನವಿ ಮಾಡಿದರು.
ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಟೇಲ್ ಕೈಗೊಂಡ ದಿಟ್ಟ ನಿರ್ಧಾರದಿಂದ ದೇಶದಲ್ಲಿ ಶಾಂತಿ ಮೂಡಿತು. ಅಭಿವೃದ್ಧಿಗೆ ಚಾಲನೆ ಸಿಕ್ಕಿತು. ಆದರೆ ಜಮ್ಮು ಮತ್ತು ಕಾಶ್ಮೀರ್ ರಾಜ್ಯವನ್ನು ದೇಶದ ಒಕ್ಕೂಟದಲ್ಲಿ ವಿಲೀನಗೊಳಿಸವ ಜವಾಬ್ದಾರಿಯನ್ನು ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರು ವಹಿಸಿಕೊಂಡರು. ಆದರೆ ಯಶಸ್ಸು ಕಾಣಲಿಲ್ಲ. ಪರಿಣಾಮ ಇಂದೂ ಕೂಡ ಅಲ್ಲಿನ ಜನತೆ ಹಲವಾರು ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
1 ಕಿಲೋ ಕಬ್ಬಿಣ: ದೇಶದ ಎಲ್ಲಾ ಭಾಗಗಳಿಂದ ಮಣ್ಣು ಹಾಗೂ ರೈತರು ಉಪಯೋಗಿಸಿದ ಒಂದು ಕೆ.ಜಿ. ಲೋಹವನ್ನು ಸಂಗ್ರಹ ಮಾಡಿ ಏಕತಾ ಟ್ರಸ್ಟ್‌ಗೆ ನೀಡಲಾಗುತ್ತಿದೆ ಎಂದು ಹೇಳಿದರು.
ಗುಜರಾತ್ ರಾಜ್ಯದ ನರ್ಮದಾ ನದಿ ಸರ್ದಾರ್ ಸರೋವರ್ ಪಕ್ಕದ ಸಾದು ದ್ವೀಪದಲ್ಲಿ ರು. 2600 ಕೋಟಿ ವೆಚ್ಚದ 182 ಮೀಟರ್ ಎತ್ತರದ ಲೋಹ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಕಳೆದ ವರ್ಷ ಅ. 30ರಂದು ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅದ್ವಾನಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಈ ಕಾಮಗಾರಿ 3 ವರ್ಷಗಳಲ್ಲಿ ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದರು. ಪ್ರತಿಮೆ ಮುಂಭಾಗದಲ್ಲಿ ಎರಡು ವಸ್ತು ಸಂಗ್ರಾಲಯ ಸ್ಥಾಪನೆ ಮಾಡಲಾಗುವುದು. ದೇಶದ ನಾನಾ ಭಾಗಗಳಿಂದ ತೆಗೆದುಕೊಂಡತಹ ಮಣ್ಣನ್ನು ವೀಕ್ಷಣೆಗೆ ಇಡಲಾಗುವುದು. ಅಲ್ಲದೆ ರೈತರಿಗೆ ಉಪಯುಕ್ತವಾಗುವ ಯೋಜನೆಗಳ ಮಾಹಿತಿ ವಿವರ ದೊರೆಯುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶರಣಗೌಡ ಪಟ್ಟೇದಾರ ಯಡ್ಡಳ್ಳಿ, ರಮೇಶ ಕೋಟಿಮನಿ, ರಾಮನಗೌಡ ಚಿದ್ರಿ, ಸೂರಜ್ ಸಿಂಗ್ ಠಾಕೂರ್, ಭೀಮರಾಯ ಜಂಗಳಿ, ಶ್ರೀದೇವಿ, ವೇಣು ಗೋಪಾಲ ಜೀವರ್ಗಿ ಮುಂತಾದವರು ಇದ್ದರು.