ಗುಂಡಿನ ಕಾಳಗ ಪ್ರಕರಣ ವಿಚಾರಣೆ ಅನಗತ್ಯ
ಕ.ಪ್ರ. ವಾರ್ತೆ, ಗುಲ್ಬರ್ಗ, ಜ.10
ಪಾತಕಿ ಮುನ್ನಾ ಹಾಗೂ ಪೊಲೀಸ್ ನಡುವಿನ ಗುಂಡಿನ ಚಕಮಕಿ ಗುಪ್ತವಾರ್ತೆ ಆಧರಿತ ಕಾರ್ಯಾಚರಣೆ. ಇಲ್ಲಿ ಸಾರ್ವಜನಿಕವಾಗಿ ಯಾವುದೇ ತೊಂದರೆಯಾಗಿಲ್ಲ, ಪೊಲೀಸರಿಗೆ ಏಟು ಬಿದ್ದಿದೆ. ಅಧಿಕಾರಿಗಳು ವೃತ್ತಿಪರತೆ ಮೆರೆದಿದ್ದರಿಂದ ಇದರ ಬಗ್ಗೆ ಯಾವುದೇ ತರಹದ ವಿಚಾರಣೆ ಅಗತ್ಯವಿಲ್ಲ ಎಂದು ರಾಜ್ಯ ಎಡಿಜಿಪಿ (ಕಾ-ಸು) ಎಂಎನ್‌ಎಸ್ ರೆಡ್ಡಿ ತಿಳಿಸಿದ್ದಾರೆ.
ಗುಂಡಿನ ಕಾಳಗದಲ್ಲಿ ಹಲವು ಶಂಕೆಗಳು ಮೂಡಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು(ಐಜಿಪಿ, ಎಸ್ಪಿ) ಅಧೀನ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಎಡವಿದ್ದಾರೆ. ರೌಡಿ ನಿಗ್ರಹದ ಕಾರ್ಯದಲ್ಲಿ ತಂಡಕ್ಕೆ ಪಕ್ಕಾ ನೆರವು ದೊರಕಿಲ್ಲ. ಅದಕ್ಕಾಗಿ ಪ್ರಕರಣದ ಲೋಪದೋಷಗಳನ್ನು ಹೊರಗೆಳೆಯಲು ವಿಚಾರಣೆ ನಡೆಯಬೇಕೆಂದು ವಿವಿಧ ಸಂಘ- ಸಂಸ್ಥೆಗಳವರು ಎಡಿಜಿಪಿಗೆ ಆಗ್ರಹಿಸಿದರು.
ವಿಚಾರಣೆ ಯಾಕೆ?: ಸಾರ್ವಜನಿಕವಾಗಿ ಆಸ್ತಿ- ಪಾಸ್ತಿಗೆ ಹಾನಿಯಾದಾಗ, ಪ್ರಕರಣದಲ್ಲಿ ದೋಷಗಳು ಮೇಲ್ನೋಟಕ್ಕೆ ಕಂಡಾಗ ವಿಚಾರಣೆ ಪ್ರಶ್ನೆ ಉದ್ಭವವಾಗುತ್ತದೆ. ಇಲ್ಲಿ ಪೊಲೀಸರ ಕಾರ್ಯಾಚರಣೆ ನಡೆದಿದೆ, ರೌಡಿ ಸಾವನ್ನಪ್ಪಿದ್ದಾನೆ. ಅಧಿಕಾರಿಗಳು ಗಾಯಗೊಂಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ಎಲ್ಲವೂ ಮೇಲ್ನೋಟಕ್ಕೆ ಸ್ಪಷ್ಟವಾಗಿರುವಾಗ ವಿಚಾರಣೆ ಯಾಕೆ ಎಂದು ರೆಡ್ಡಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ ಪ್ರಶ್ನಿಸಿದರು.
ಹಿರಿಯ ಅಧಿಕಾರಿಗಳು ತಂಡಕ್ಕೆ ಬೆಂಬಲಿಸಲಿಲ್ಲ. ರೌಡಿ 2 ಬಾರಿ ತಪ್ಪಿಸಿಕೊಂಡಾಗ ಹೆಚ್ಚಿನ ಬಲಕ್ಕಾಗಿ ಮನವಿ ಮಾಡಿದ ತಂಡಕ್ಕೆ ಅಧಿಕಾರಿಯೊಬ್ಬರು ಶೂಟ್ ಮಾಡಬೇಡಿ ಎಂದು ಹೇಳಿದ್ದಾರೆಂಬ ಆರೋಪಗಳಿವೆಯಲ್ಲ ಎಂದು ರೆಡ್ಡಿಯವರ ಗಮನ ಸೆಳೆದಾಗ, ಅವರು 'ಇಂತಹ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ತಾವೇ ಖುದ್ದು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದು 3 ಹಂತದಲ್ಲಿ ಪ್ರಕರಣ ನಡೆದಿದೆ. ಅದರಲ್ಲಿ ಭಾಗಿಯಾಗಿ ತುಸು ಚೇತರಿಸಿಕೊಂಡಿರುವ ಮುರಳಿ, ಹೇಮಂತ ಕುಮಾರ್ ಅವರೇ ತಮಗೆ ವಿವರಣೆ ನೀಡಿದ್ದಾರೆ. ಅಧಿಕಾರಿಗಳೊಂದಿಗೂ ಚರ್ಚಿಸಿದ್ದೇನೆ' ಎಂದರು.
ಐಜಿಪಿ ವರ್ಗಾವಣೆಗೆ ಆಗ್ರಹ: ಕನ್ನಡಪರ ಸಂಗಟನೆಗಳ ಒಕ್ಕೂಟದವರು ಎಡಿಜಿಪಿ ರೆಡ್ಡಿ ಅವರನ್ನು ಭೇಟಿ ಮಾಡಿ ಐಜಿಪಿ ವಜೀರ್ ಅಹ್ಮದ್ ಅವರು ಈ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದು, ತಕ್ಷಣ ವರ್ಗ ಮಾಡುವಂತೆ ಆಗ್ರಹಿಸಿದ್ದಾರೆ. ವೀರ ಕನ್ನಡಿಗರ ಸೇನೆ, ಕರವೇ, ಜೈಕರವೇ, ಕನ್ನಡ ನಾಡು ವೇದಿಕೆ, ಪಂಚ ಜಿಲ್ಲೆ ಜನಪರ ಹೋರಾಟ ಸಮಿತಿ, ಬೀದಿ ವರ್ತಕರ ಸಂಘಟನೆಗಳು ಸೇರಿದಂತೆ ಅನೇಕ ಸಂಘಗಳ ಪ್ರಮುಖರಾದ ಅಮೃತ ಸಿರನೂರ್, ಎಂಎಸ್ ಪಾಟೀಲ್ ನರಿಬೋಳ, ಸಚಿನ್ ಫರತಾಬಾದ್, ಜಗನ್ನಾಥ ಸೂರ್ಯವಂಶಿ ಸೇರಿದಂತೆ ನಿಯೋಗದಲ್ಲಿದ್ದರು.
ಉಸ್ತುವಾರಿ ಸಚಿವರ ಮೇಲೂ ಆರೋಪ: ಕನ್ನಡಪರ ಸಂಘಟನೆಗಳ ಸದಸ್ಯರು ನಗರದ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಸಾಕಷ್ಟು ನಡೆಯುತ್ತಿದ್ದರೂ ಪೊಲೀಸ್ ವ್ಯವಸ್ಥೆ ಬಿಗಿಯಾಗಿರುವಂತೆ ಉಸ್ತುವಾರಿ ನಿರ್ವಹಿಸುವಲ್ಲಿ ಸಚಿವ ಖಮರುಲ್ ಇಸ್ಲಾಂ ವಿಫಲರಾಗಿದ್ದಾರೆಂದು ಐಜಿಪಿ ವಜೀರ್ ಅಹ್ಮದ್ ಹಾಗೂ ಖಮರುಲ್ ಇಸ್ಲಾಂ ಅವರ ಪ್ರತಿಕೃತಿ ದಹನ ಮಾಡಿ ಟೈರ್‌ಗೆ ಬೆಂಕಿ ಇಟ್ಟು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂದಿನ ಮುಖ್ಯ ರಸ್ತೆಯಲ್ಲಿ ಈ ಪ್ರತಿಭಟನೆ ನಡೆದಾಗ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಪಂಚ ಪ್ರಶ್ನೆ
ವೀರಶೈವ ಯುವ ವೇದಿಕೆ ರೆಡ್ಡಿ ಅವರನ್ನು ಭೇಟಿ ಮಾಡಿ ಘಟನೆ ವಿಚಾರಣೆ ನಡೆಸುವಂತೆ ಆಗ್ರಹಿಸಿದೆ. ಮನವಿಯಲ್ಲಿ ಪಂಚ ಪ್ರಶ್ನೆಗಳನ್ನು ಕೇಳಿದೆ.
1. ಮುನ್ನಾ ಶಾರ್ಪ್ ಶೂಟರ್ ಎಂದು ಗೊತ್ತಿದ್ದರೂ ಪಕ್ಕಾ ಯೋಜನೆ ರೂಪಿಸದೆ ಯಾಕೆ ಪಿಎಸ್‌ಐಗಳ ತಂಡವನ್ನು ಅಲ್ಲಿಗೆ ಹೋಗೆಂದು ಹಿರಿಯ ಅಧಿಕಾರಿಗಳು ಹೇಳಿದರು?
2. ಗುಲ್ಬರ್ಗ ಈಚೆಗೆ ಅಪರಾಧಗಳ ತಾಣವಾಗುತ್ತಿದೆ. ಇದಕ್ಕೆಲ್ಲ ಹಿರಿಯ ಅಧಿಕಾರಿಗಳು ಪೂರಕ ಸಿಬ್ಬಂದಿಗೆ ಸರಿಯಾಗಿ ಮಾರ್ಗದರ್ಶನ ನೀಡದ್ದೇ ಕಾರಣ. ಐಜಿಪಿ, ಎಸ್ಪಿಗಳಿಂದ ವಿವರಣೆ ಕೇಳಬಾರದೇಕೆ?
3. ಶಾರ್ಪ್ ಶೂಟರ್ ಮುನ್ನಾಗೆ ರಕ್ಷಿಸುವ ಹುನ್ನಾರ ನಡೆಯಿತೇ ಎಂಬ ಶಂಕೆಯಿದ್ದು ವಿಚಾರಣೆಯಿಂದ ಮಾತ್ರ ಪ್ರಕರಣದ ಸತ್ಯಾಸತ್ಯತೆ ಬಯಲಿಗೆ ಬರುತ್ತದೆ, ತಕ್ಷಣ ವಿಚಾರಣೆಗೆ ಯಾಕೆ ಮುಂದಾಗಬಾರದು?
4. ಬ್ಯಾಂಕ್ ಸೇರಿ ಅನೇಕ ಮಹತ್ವದ ದರೋಡೆಗಳು ನಡೆದರೂ ಆರೋಪಿಗಳಲ್ಲದವರಿಗೆ ಬಂಧಿಸಿ ಕಾಲಹರಣ ಮಾಡುತ್ತಿರುವ ಪೊಲೀಸ್ ಅಧಿಕಾರಿಗಳ ಹಿಂದಿನ ಧೋರಣೆಯ ವಾಸ್ತವ ಏನು?
5. ಕಳೆದ 6 ತಿಂಗಳಲ್ಲಿ ರೌಡಿಗಳು ಬಾಲ ಬಿಚ್ಚುತ್ತಿದ್ದಾರೆ. ಇದಕ್ಕೆ ಪೊಲೀಸರ ನಿಷ್ಕ್ರೀಯತೆ ಕಾರಣ. ಹಿರಿಯ ಅಧಿಕಾರಿಗಳು ಯಾಕೆ ಈ ವಿಚಾರದಲ್ಲಿ ಗಂಭೀರರಾಗುತ್ತಿಲ್ಲ?