ಬೆಂಬಲ ಬೆಲೆಗೆ ಆಗ್ರಹಿಸಿ ಪ್ರತಿಭಟನೆ
ಕ.ಪ್ರ. ವಾರ್ತೆ ಗುರುಮಠಕಲ್ ಜ.10
ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದ ಸುಭಾಶ್ಚಂದ್ರ ಬೋಸ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ದೇಶದಲ್ಲಿ ಕಾರ್ಮಿಕ ಬಿಕ್ಕಟ್ಟು ಹೆಚ್ಚುತ್ತಿದೆ. 3 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದುದರಿಂದ ರೈತರ ಸಮಸ್ಯೆಗಳ ಕುರಿತು ರಚಿಸಲಾದ ಆಯೋಗದ ಅಧ್ಯಕ್ಷ ಡಾ. ಸ್ವಾಮಿನಾಥನ್ ವರದಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸದರು.
ಕ್ರಮ ಅಗತ್ಯ: ಕರವೇಯ ಶರಣು ಗದ್ದುಗೆ, ಭೀಮುನಾಯಕ, ಕನ್ನಡ ಸೇನೆಯ ರಾಜು ಕುಂಬಾರ ಮಾತನಾಡಿ, ರೈತ ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು. ರೈತರ ಆತ್ಮಹತ್ಯೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ನಾಗನಗೌಡ ಕಂದಕೂರ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಪರದಾಡುತ್ತಿದ್ದಾರೆ. ಮಾರುಕಟ್ಟೆ ಇದ್ದಲ್ಲಿ ದಲ್ಲಾಳಿಗಳ ಪಾಲಾಗುತ್ತಿದೆ ಎಂದು ಆರೋಪಿಸಿದರು.
ಆಕ್ರೋಶ: ರೈತ ಮುಖಂಡ ವಿಶ್ವನಾಥರಡ್ಡಿ ಗೊಂದಡಗಿ ಮಾತನಾಡಿ, ರೈತ ಬೀಜಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ರಸಗೊಬ್ಬರಕ್ಕಾಗಿ ಪೊಲೀಸರ ಗುಂಡಿಗೆ ಬಲಿಯಾಗುತ್ತಿದ್ದಾನೆ. ಮಾಡಿದ ಸಾಲ ತೀರಿಸಲಿಕ್ಕಾಗದೆ ಆತ್ಮಹತ್ಯೆ ಹಾದಿ ಹಿಡಿದಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಎಸ್.ಎಂ. ಸಾಗರ, ಸಿಐಟಿಯುನ ಜೈಲಾಲ ತೋಟದಮನಿ, ಗ್ರಾ.ಪಂನೌಕರರ ಸಂಘದ ನಾಗಣ್ಣಗೌಡ, ಬಿಜೆಪಿ ಮುಖಂಡ ಸಿದ್ದಾರಡ್ಡಿ ಬಲ್ಕಲ್, ಚಂದ್ರಗಿರಿ ಹತ್ತಿಗುಡರು, ಬಸವರಾಜಪ್ಪ ಗೌಡ ಹೆಮ್ಮಡಗಿ, ಮಲ್ಲಯ್ಯ ಪೊಲಂಪಲ್ಲಿ, ಮಲ್ಲಣ್ಣ ಬಸವಂತಪೂರ, ಹೊನ್ನಪ್ಪ ಹೋತಪೇಠ, ಹಣಮಗೌಡ ನಾರಾಯಣಪುರ, ಲಕ್ಷಣರಾವ್ ನಾಯಕ್, ಶರಣಗೌಡ ಮಾವಿನಮಟ್ಟಿ ಸೇರಿದಂತೆ ರೈತರು ಭಾಗವಹಿಸಿದ್ದರು.