ರೈತರ ಉಳಿವಿಗಾಗಿ ಹೋರಾಟ ಅನಿವಾರ್ಯ
ಅಫಜಲ್ಪುರ: ದೇಶದ ಬೆನ್ನೆಲುಬು ಎಂದು ಹೇಳುವ ರೈತರ ಬೆನ್ನು ಮೂಳೆ ಇಲ್ಲದಂತೆ ಮಾಡುತ್ತಿರುವ ಸರ್ಕಾರದ ಧೋರಣೆಗಳು ಕೂಡಲೇ ನಿಲ್ಲಬೇಕು. ರೈತರ ಪರ ಮತ್ತು ಅಭಿವೃದ್ಧಿ ಪರವಾದ ಸರ್ಕಾರದ ಅವಶ್ಯಕತೆ ಇದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ರೈತರನ್ನು ಕಡೆಗಣಿಸುತ್ತಿರುವ ಸರ್ಕಾರದ ವಿರುದ್ಧ ಮತ್ತು ರೈತರ ಉಳಿವಿಗಾಗಿ, ಬೆಳವಣಿಗೆಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ರಾಜಕುಮಾರ ಬಡದಾಳ ಹೇಳಿದರು.
ನಷ್ಟ: ಅವರು ಅಫಜಲ್ಪುರ ಪಟ್ಟಣದ ಬಂದ್ ಮಾಡಿ ಪಟ್ಟಣದ ಬಸವೇಶ್ವರ ವೃತ್ತದಿಂದ ತಹಸೀಲ್ದಾರ್ ಕಚೇರಿಯ ವರೆಗೆ ನಡೆದ ಪ್ರತಿಭಟನಾ ರ್ಯಾಲಿ ಉದ್ದೇಶಿಸಿ, ಪ್ರಮುಖ ಬೇಳೆಕಾಳು ಬೆಳೆಗಳಾದ ತೊಗರಿ, ಉದ್ದು, ಹೆಸರುಗಳನ್ನು ಹೆಚ್ಚಾಗಿ ಬೆಳೆಯುವ ಹೈ.ಕ. ಜಿಲ್ಲೆಗಳ ರೈತರು ಬೆಳೆಕಾಳು ಬೆಳೆಯನ್ನು ಬೆಳೆದು ಕೈ ಸುಟ್ಟುಕೊಳ್ಳುವಂತಾಗಿದೆ. ಸರ್ಕಾರ ರೈತರು ಬೆಳೆದ ಬೆಳೆಗೆ ಸರಿಯಾದ ಸಮಯಕ್ಕೆ ಬೆಂಬಲ ಬೆಲೆ ನಿಗದಿಪಡಿಸದೆ ಇರುವುದು ಮತ್ತು ರೈತರ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಇದಕ್ಕೆ ಕಾರಣವಾಗಿದೆ.
ಸುಂಕ ಹಾಕಿ: ಹೀಗಾಗಿ ಕೂಡಲೇ ಸರ್ಕಾರ ನಿಗದಿಪಡಿಸಿರುವ ಬೆಲೆಯನ್ನು ಪಾವತಿಸಬೇಕು. ತೊಗರಿಗೆ ರು. 6450 ಬೆಲೆ ಘೋಷಿಸಬೇಕು. ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವ ತೊಗರಿಗೆ ಶೇ. 30ರಷ್ಟು ಸುಂಕ ಹಾಕಬೇಕು. ವಿದೇಶಗಳಿಂದ ತರಿಸುವ ಸಕ್ಕರೆಗೆ ಶೇ. 40ರಷ್ಟು ಸುಂಕ ಹೇರಬೇಕು. ಪ್ರತಿಯೊಂದು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಮತ್ತು ತಾಲೂಕಿನ ಹಳ್ಳಿಗಳ ರಸ್ತೆಗಳ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದರು.
ಸರ್ಕಾರ ಕೂಡಲೇ ಡಾ. ಎಂ.ಎಸ್. ವಿಶ್ವನಾಥನ್ ಶಿಫಾರಸನ್ನು ಅನುಷ್ಠಾನಕ್ಕೆ ತಂದು ರೈತರ ಹಿತ ಕಾಯಬೇಕು. ರೈತರು ರಾಶಿ ಮಾಡುವ ಮುಂಚೆಯೇ ಬೆಲೆ ನಿಗದಿ ಪಡಿಸಿ ಅವರಿಗೆ ಸೂಕ್ತ ಸಮಯಕ್ಕೆ ಬೆಲೆ ಸಿಗುವಂತಾಗಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಸಲುವಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಸುರೇಶ ಅವಟೆ, ಮಲ್ಲಿಕಾರ್ಜುನ ನಿಂಗದಳ್ಳಿ, ಜಾವಿದ ಬಳಗಾರ, ಗೌರಿಶಂಕರ ಹೆಗ್ಗಿ, ಬಾಬುರಾವ ಜೇವರ್ಗಿ, ಮಹಾಂತೇಶ ಗುಣಾರಿ ಮಾತನಾಡಿದರು. ಪ್ರತಿಭಟನೆಯಲ್ಲಿ ಸುನಿಲ್ ಹೊಸ್ಮನಿ, ಬಾಬು ಕಲ್ಲೂರ, ಶ್ರಿಶಯಲ ಸಿಂಗೆ ಸಿದ್ದಾರ್ಥ ಮೇಲಿಕೆರಿ, ವಿವೇಕ ಮಣ್ಣೂರ, ಶಿವಾನಂದ ಸಲಗರ ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು.