ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತಜ್ಞ ವೈದ್ಯರು ಬಯಸಿದರೆ ಬಂಡೆ ವಿದೇಶಕ್ಕೆ ಸ್ಥಳಾಂತರ

Rashmi Kasaragodu
Updated On : 12 Jan 2014, 1:08 am

ಕ.ಪ್ರ.ವಾರ್ತೆ    ಗುಲ್ಬರ್ಗ    ಜ. 11
ಪಾತಕಿ ಮುನ್ನಾ ಜೊತೆಗಿನ ಕಾಳಗದಲ್ಲಿ ಗುಂಡೇಟಿನಿಂದ ತಲೆ ಹಾಗೂ ಮೆದುಳಿಗೆ ಭಾರಿ ಗಾಯವಾಗಿ ಹೈದ್ರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಟೇಷನ್ ಬಜಾರ್ ಪಿಐ ಮಲ್ಲಿಕಾರ್ಜುನ ಬಂಡೆ ಇವರ ಆರೋಗ್ಯ ವಿಚಾರಿಸಲು ಶನಿವಾರ ಜಿಲ್ಲಾ ಪಾಲಕ ಮಂತ್ರಿ ಖಮರುಲ್ ಇಸ್ಲಾಂ ಬೆಂಗಳೂರಿನಿಂದ ನೇರವಾಗಿ ಹೈದ್ರಾಬಾದ್ಗೆ ಭೇಟಿ ನೀಡಿದ್ದರು.
ಬಂಡೆ ಅವರನ್ನು ನೋಡಿಕೊಳ್ಳುತ್ತಿರುವ ನರರೋಗ ತಜ್ಞ ಡಾ. ರಂಗನಾಥಂ ಹಾಗೂ ತಂಡದ ಜೊತೆ ಮಾತುಕತೆ ನಡೆಸಿದ ಖಮರುಲ್ ಇಸ್ಲಾಂ, ಹೆಚ್ಚಿನ ಚಿಕಿತ್ಸೆಗೆ ಬಂಡೆ ಅವರನ್ನು ದೇಶಿಯವಾಗಿ ಅಥವಾ ವಿದೇಶಕ್ಕೂ ಸ್ಥಳಾಂತರಿಸಲು ಸರ್ಕಾರ ಬದ್ಧ ಎಂದು ಸರ್ಕಾರದ ಪರವಾಗಿ ಸ್ಪಷ್ಟ ಸಂದೇಶ ನೀಡಿದರು. ಅಲ್ಲದೆ ತಜ್ಞರು ಸಲಹೆ ನೀಡಿದಂತೆ ತಾವು ಹಾಗೂ ತಮ್ಮ ಸರ್ಕಾರ ಸ್ಪಂದಿಸುತ್ತದೆ ಎಂದು ಹೇಳಿದ್ದಾರೆ.
ದೇಹಸ್ಥಿತಿ ಇನ್ನೂ ಗಂಭೀರ: ಬಂಡೆ ಅವರ ದೇಹಸ್ಥಿತಿ ಇನ್ನೂ ಗಂಭೀರವಾಗಿಯೇ ಇರುವುದಾಗಿ ವೈದ್ಯರು ಹೇಳಿದ್ದಾರೆ. ಈ ಹಂತದಲ್ಲಿ ಅವರನ್ನು ವಿದೇಶಕ್ಕೆ ಅಥವಾ ದೇಶಿಯವಾಗಿ ಸ್ಥಳಾಂತರಿಸುವುದು ಕಷ್ಟದ ಕೆಲಸ. ಮಾರ್ಗಮಧ್ಯೆ ಏನಾದರೂ ಹೆಚ್ಚುಕಡಿಮೆ ಆಗುವ ಅಪಾಯಗಳಿರುತ್ತವೆ. ಹೀಗಾಗಿ ಅವರ ಆರೋಗ್ಯದಲ್ಲಿ ತುಸು ಸ್ಥಿರತೆ ಕಂಡರೂ ಅವರನ್ನು ಹೆಚ್ಚಿನ ಚಿಕಿತ್ಸೆಗೆ ರವಾನಿಸಲು ಅನುಕೂಲವಾಗುತ್ತದೆ ಎಂದು ವೈದ್ಯರ ತಂಡ ತಮ್ಮ ಜೊತೆ ಮಾತನಾಡುತ್ತ ಅಭಿಪ್ರಾಯಪಟ್ಟಿದೆ ಎಂದು ಖಮರುಲ್ 'ಕನ್ನಡಪ್ರಭ'ಕ್ಕೆ ಹೇಳಿದ್ದಾರೆ.
ಬಂಡೆ ಅವರ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆ. ಸಿಎಂ ಹಾಗೂ ಗೃಹ ಸಚಿವರಿಬ್ಬರಿಗೂ ನಿರಂತರ ಮಾಹಿತಿ ನೀಡುತ್ತಿರುವುದಾಗಿ ಹೇಳಿರುವ ಖಮರುಲ್ ಇಸ್ಲಾಂ, ಬಂಡೆ ಅವರು ಬೇಗನೆ ಗುಣಮುಖರಾಗಿ ಬರಲಿ ಎಂಬುದೇ ತಮ್ಮ ಪ್ರಾರ್ಥನೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಬಂಡೆ ಅವರ ಪತ್ನಿ, ಸಹೋದರರು ಹಾಗೂ ಬಂಧುಗಳೊಂದಿಗೆ ನರರೋಗ ತಜ್ಞ ಡಾ. ರಂಗನಾಥಂ ಅವರೊಂದಿಗೆ ಚರ್ಚಿಸಿದರು.
ವೈದ್ಯರ ಸೂಚನೆ ಪಾಲಿಸಲು ಸಿದ್ಧ: ತಜ್ಞ ವೈದ್ಯರು ಬಂಡೆ ಅವರ ಆರೋಗ್ಯದ ವಿಚಾರದಲ್ಲಿ ಯಾವುದೇ ರೀತಿಯ ಸಲಹೆ ನೀಡಲಿ, ಇಂತಹ ಸ್ಥಳಕ್ಕೆ ಕರೆದೊಯ್ಯಿರಿ ಎಂದು ಸೂಚಿಸಲಿ, ಸರ್ಕಾರ ಅದನ್ನು ಚಾಚೂ ತಪ್ಪದೆ ಪಾಲಿಸಲು ಸಿದ್ಧ ಎಂದು ಇಸ್ಲಾಂ ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.
ತಾವು ಗುಲ್ಬರ್ಗದಲ್ಲಿ 4 ದಶಕಗಳಿಂದ ರಾಜಕೀಯದಲ್ಲಿದ್ದು, ಯಾವ ಸಂದರ್ಭದಲ್ಲಿಯೂ ರೌಡಿಸಂಗೆ ಪ್ರೋತ್ಸಾಹಿಸಿಲ್ಲ. ರಾಜಕೀಯವಾಗಿಯೇ ಎಲ್ಲವನ್ನೂ ಎದುರಿಸಿದ್ದೇವೆ. ಎಂದಿಗೂ ರೌಡಿಗಳ ಬೆಂಬಲಕ್ಕೆ ನಿಂತಿರುವ ಉದಾಹರಣೆಗಳಿಲ್ಲ. ಆದರೆ ಕೆಲವು ಸಂಘಟನೆಗಳವರು ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ, ಸ್ವಾರ್ಥ ಸಾಧನೆ ಉದ್ದೇಶದೊಂದಿಗೆ ಆರೋಪ ಮಾಡುವವರ ಸಾಚಾತನ ಗುಲ್ಬರ್ಗ ಜನತೆಗೆ ಗೊತ್ತಿದೆ ಎಂದು ಇಸ್ಲಾಂ ಹೇಳಿದ್ದಾರೆ.
ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಇವರೇ ಇರಲಿ, ಇವರು ಬೇಡ ಎಂಬ ವಿಚಾರ ಮಾಡುವವರ ಪೈಕಿ ತಾವಲ್ಲ. ಎಂದಿಗೂ ಇಂಥ ಬೆಳವಣಿಗೆಗಳಲ್ಲಿ ಮೂಗು ತೂರಿಸಿಲ್ಲ. ಹಿರಿಯ ಅಧಿಕಾರಿಗಳನ್ನು ಸರ್ಕಾರ ನಿಯುಕ್ತಿ ಮಾಡುತ್ತದೆ. ಅವರು ತಮ್ಮ ಕೆಲಸ ನಿರ್ವಹಿಸುತ್ತಾರೆ. ಕಾನೂನು ಚೌಕಟ್ಟಿನಲ್ಲಿರುವ ಕೆಲಸಗಳನ್ನು ಎಲ್ಲರೂ ಮಾಡಬೇಕೇ ಹೊರತು ಯಾರೇ ಆಗಲಿ ಪ್ರಭಾವಕ್ಕೆ ಮಣಿದಲ್ಲಿ ಕಾನೂನೇ ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಸಚಿವ ಇಸ್ಲಾಂ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement