ವಿವೇಕಾನಂದ ಜಯಂತಿ ಆಚರಣೆ ಕಡ್ಡಾಯಗೊಳಿಸಿ
ಕನ್ನಡಪ್ರಭ ವಾರ್ತೆ ಯಾದಗಿರಿ ಜ.12
ಸ್ವಾಮಿ ವಿವೇಕಾನಂದರು ಯುವ ಜನತೆಯ ರೋಲ್ ಮಾಡೆಲ್ ಆಗಿದ್ದಾರೆಂದು ಜಿಲ್ಲಾ ಕ್ರೀಡೆ ಮತ್ತು ಯುವಜನ ಸೇವಾ ಅಧಿಕಾರಿ ಸೂಗಪ್ಪ ಪಾಟೀಲ್ ಹೇಳಿದರು.
ಸ್ಟೇಷನ್ ರಸ್ತೆಯಲ್ಲಿರುವ ಶಿವನಗರದ ವೀರಭಾರತಿ ಪ್ರತಿಷ್ಠಾನ ವತಿಯಿಂದ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 151ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅವರ ಜ್ಞಾನವನ್ನು ಯುವಕರು ಹೊಂದಬೇಕಾದರೆ ಅವರ ಪಾಂಡಿತ್ಯವನ್ನು ಯುವ ಜನತೆಗೆ ಅವರ ಕಾರ್ಯಕ್ರಮಗಳ ಮೂಲಕ ತಿಳಿಸುವುದು ಇಂದಿನ ಅಗತ್ಯ ಎಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಹಿತ ಚಿಂತಕರ ವೇದಿಕೆ ಅಧ್ಯಕ್ಷ ಅನಂತರೆಡ್ಡಿ ಪಾಟೀಲ್, ಗುರುರಾಜ ಸೇವಾ ಸಮಿತಿ ಅಧ್ಯಕ್ಷರಾದ ಸುರೇಶ ದೇಶಪಾಂಡೆ, ಆಮ್ ಆದ್ಮಿ ಪಕ್ಷದ ಮುಖಂಡರಾದ ಅಮೀನರೆಡ್ಡಿ ಪಾಟೀಲ್ರು ಮಾತನಾಡಿ, ವಿವೇಕಾನಂದ ಜಯಂತಿಯನ್ನು ಪ್ರತಿವರ್ಷ ಕಡ್ಡಾಯವಾಗಿ ಆಚರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ವೀರಭಾರತಿ ಪ್ರತಿಷ್ಠಾನ ಅಧ್ಯಕ್ಷ ವೈಜನಾಥ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದಕ್ಕೂ ಮುನ್ನ ವಿವೇಕಾನಂದರ ಭಾವಚಿತ್ರಕ್ಕೆ ಜಿಲ್ಲಾ ಕ್ರೀಡಾಧಿಕಾರಿ ಪಾಟೀಲ್ ಪುಷ್ಪನಮನ ಹಾಗೂ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಯುವಸೇನೆ ಅಧ್ಯಕ್ಷ ಲಕ್ಷ್ಮಣ ಪವಾರ್, ಯುವ ಮುಖಂಡರಾದ ಭೀಮು ರಾಠೋಡ ಹೋರುಂಚಾ, ಅಂಜುಮನ್ ಫಲಾ ಮಾಶ್ರಾ ಸಂಸ್ಥೆ ಅಧ್ಯಕ್ಷ ಮುಬೀನ್ ಅಹ್ಮದ್ ಜಖಂ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.
ಹುಣಸಗಿಯಲ್ಲಿ: ಪಟ್ಟಣದಲ್ಲಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹುಣಸಗಿ ಹೋಬಳಿ ಘಟಕದಿಂದ ವಿವೇಕಾನಂದರ 151ನೇ ಜಯಂತಿ ಆಚರಿಸಲಾಯಿತು.
ಸಂಘಟನೆಯ ಅಧ್ಯಕ್ಷ ಬಸವರಾಜ ಕಟ್ಟಿಮನಿ ಮಾತನಾಡಿ, ಜಗತ್ತು ಕಂಡ ಅಪ್ಪಟ ದೇಶಪ್ರೇಮಿ ವಿವೇಕಾನಂದರು. ಅವರ ತತ್ವಾದರ್ಶಗಳನ್ನು ಯುವ ಜನತೆ ಅಳವಡಿಸಿಕೊಂಡು ನೂತನ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಮಾತನಾಡಿದರು.
ಉಪಾಧ್ಯಕ್ಷ ದುರುಗಪ್ಪ ಇಸ್ಲಾಂಪುರ ಮಾತನಾಡಿದರು. ದೇವಪ್ಪ ಸಂದಿಮನಿ, ಮಹಾಂತೇಶ ಕಟ್ಟಿಮನಿ, ಅಂಬ್ರೇಶ ಕಟ್ಟಿಮನಿ, ಲಕ್ಷ್ಮಣ ಮೇಲಿನಮನಿ ಇತರರು ಇದ್ದರು. ಮಲ್ಲಿಕಾರ್ಜುನ ನಿರೂಪಿಸಿದರು. ಸಂತೋಷ ಸೊನ್ನಾಪುರ ವಂದಿಸಿದರು. ಪಕೀರಪ್ಪ ಗ್ಯಾಂಗಮನ್ ಸ್ವಾಗತಿಸಿದರು.
'ಬಹುಮುಖ ಪ್ರತಿಭೆಯ ವೀರ ಸನ್ಯಾಸಿ'
ಶಹಾಪುರ: ಸ್ವಾಮಿ ವಿವೇಕಾನಂದರು ದೇಶಭಕ್ತರಾಗಿ ಸಮಾಜ ಸುಧಾರಕರಾಗಿ ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿ ಬಹುಮುಖ ಪ್ರತಿಭೆಯ ವೀರ ಸನ್ಯಾಸಿಯಾಗಿದ್ದರು ಎಂದು ಮುಖಂಡ ಷಣ್ಮುಖಪ್ಪ ಕಕ್ಕೇರಿ ತಿಳಿಸಿದರು. ತಾಲೂಕಿನ ದೋರನಹಳ್ಳಿ ಗ್ರಾಮ ಪಂಚಾಯ್ತಿ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 151ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವಿವೇಕಾನಂದರ ಕ್ರೀಯಾಶೀಲ ಜೀವನ ಮತ್ತು ಶಕ್ತಿಯುತ ಸಂದೇಶಗಳು ಸದಾಕಾಲ ಯುವಕರಿಗೆ ಸ್ಫೂರ್ತಿಯಾಗಿದ್ದವು ಎಂದರು.
ಮುಖಂಡ ಶಂಕ್ರಪ್ಪಶಾಣ್ಯನೋರ್ ಮಾತನಾಡಿ, ಭಾರತದ ಕೀರ್ತಿಯನ್ನು ಎಲ್ಲಾಕಡೆ ಹಬ್ಬಿಸಿದ ಧೀಮಂತ ಸನ್ಯಾಸಿ ಅವರ ತತ್ವಗಳನ್ನು ನಾವು ಪಾಲಿಸಬೇಕೆಂದರು. ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಪ್ರಮುಖರಾದ ಭೀಮಾಶಂಕರ ಅಣಬಿ ಸಿದ್ದು ವಕೀಲ, ಹಯ್ಯಾಳಪ್ಪಗುಂಟನೂರು, ಶರಣಪ್ಪ, ನಿಂಗಣ್ಣ, ರಂಗಪ್ಪ, ಸಂಗಣ್ಣಮಲಗೊಂಡ, ಶರಣಪ್ಪದಿಗ್ಗಿ, ಹಯ್ಯಾಳಪ್ಪ, ರಾಜುಆಂದೇಲಿ, ಮಹಾದೇವಪ್ಪ, ಗ್ರಾಮದ ಯುವಕರಾದ ಆನಂದನಾಶಿ, ಮಲ್ಲಯ್ಯಸ್ವಾಮಿ, ರಾಜುಕುಲ್ಕರ್ಣಿ, ಸಿದ್ದುಸ್ವಾಮಿ, ಭಾಗೇಶಸಗರ, ಮಂಜುನಾಥ, ಬಸವರಾಜ, ಶಿವರಾಜ, ಗುರುಹಗರಟ್ಟಿಗಿ, ರಾಜು, ಪ್ರಕಾಶ ಪಾಲ್ಗೊಂಡಿದ್ದರು.