'ಸಮಾಜಘಾತುಕ ಶಕ್ತಿಗಳ ಮಟ್ಟ ಹಾಕಿ'
ಶಹಾಪುರ: ಭೂಗತ ಲೋಕದ ನಂಟು ಹೊಂದಿದ್ದ ಹಾಗೂ ಪಾತಕಿ ಮುನ್ನಾ ಅವನಂಥ ವಿಛಿದ್ರಕಾರಿ ಶಕ್ತಿ ಬೆಳೆದು ನಿಲ್ಲಲು ಯಾರೆಲ್ಲ ಕಾರಣರಾಗಿದ್ದಾರೆ ಎಂಬುದರ ಬಗ್ಗೆ ನ್ಯಾಯಾಂಗ ಇಲಾಖೆಯಿಂದ ತನಿಖೆ ನಡೆಸಬೇಕು. ಸಮಾಜಘಾತುಕ ಶಕ್ತಿಗಳ ಮಟ್ಟ ಹಾಕಬೇಕೆಂದು ತಾಲೂಕ ಶ್ರೀರಾಮ ಸೇನೆ ಆಗ್ರಹಿಸಿದೆ.
ಇಂತಹ ಶಕ್ತಿ ಬೆಳೆಯಲು ಕೆಲ ಭ್ರಷ್ಟ ಪೊಲೀಸ್ ಅಧಿಕಾರಿಗಳು ಹಾಗೂ ಮುನ್ನಾನನ್ನು ತಮ್ಮ ಕೆಲಸಗಳಿಗೆ ಉಪಯೋಗಿಸುತ್ತಿದ್ದ ಕೆಲ ಭ್ರಷ್ಟ ರಾಜಕಾರಣಿಗಳು ಕಾರಣರಾಗಿದ್ದಾರೆ. ಅಲ್ಲದೆ ಕೊಲೆ ಪಾತಕಿಯನ್ನು ಕೊಲ್ಲಲು ಇಷ್ಟು ವರ್ಷಗಳೇ ಕಳೆದವು ಎಂದು ಹೇಳುವುದು ನಮ್ಮ ನಾಗರಿಕ ಸಮಾಜಕ್ಕೊಂದು ಕಳಂಕವಾಗಿದೆ ಎಂದು ಸೇನೆಯ ತಾಲೂಕಾಧ್ಯಕ್ಷ ಸುನೀಲ ಮಾನು ಹೇಳಿದರು. ಸಮಾಜಘಾತುಕ ಶಕ್ತಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು, ಪೊಲೀಸರಿಗೆ ರಕ್ಷಾ ಕವಚ ಒದಗಿಸಬೇಕು ಎಂದು ಒತ್ತಾಯಿಸಿ ಸಂಘಟನೆಯ ಕಾರ್ಯಕರ್ತರು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ವಿಛಿದ್ರಕಾರಿ ಶಕ್ತಿಗಳು ಈಗಾಗಲೇ ಸಮಾಜದಲ್ಲಿ ಹಲವಾರು ಸಂಘಟನೆಗಳ ಸೋಗು ಹಾಕಿಕೊಂಡು ದುಷ್ಟ ಕೃತ್ಯದಲ್ಲಿ ತೊಡಗಿದ್ದಾರೆ. ಇದನ್ನು ಕೂಡಲೇ ಪತ್ತೆ ಹಚ್ಚಬೇಕು. ಸಮಾಜದಲ್ಲಿ ಮುಕ್ತವಾಗಿ ಬದುಕಲು ಅವಕಾಶ ನೀಡುತ್ತಿರುವ ಪೊಲೀಸರಿಗೆ ಬುಲೆಟ್ ಪ್ರೂಫ್ ಜಾಕೆಟ್ಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು. ಕಾರ್ಯದರ್ಶಿ ಮೇಘರಾಜ ಜಾದವ್ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಹಾಜರಿದ್ದರು.