ಸೌಹಾರ್ದತೆಯಿಂದ ಹಬ್ಬ ಆಚರಿಸಿ
ಯಾದಗಿರಿ: ಈದ್ ಮಿಲಾದ್ ಮತ್ತು ಸಂಕ್ರಾಂತಿ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕೆಂದು ಅಪರಾಧ ವಿಭಾಗದ ಪಿಎಸ್ಐ ಗುರುಶಾಂತ ದಾಶ್ಯಾಳ ಹೇಳಿದರು.
ನಗರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿ, ಯಾವುದೇ ಹಬ್ಬವಿರಲಿ ಎಲ್ಲ ಧರ್ಮ, ಜಾತಿಗಳ ಮುಖಂಡರು ಒಗ್ಗಟ್ಟಿನಿಂದ ಹಾಗೂ ಒಳ್ಳೆಯ ಮನಸ್ಸಿನಿಂದ ಹಬ್ಬ ಆಚರಿಸುವ ಮೂಲಕ ಸಮಾಜದಲ್ಲಿ ಶಾಂತಿ- ನೆಮ್ಮದಿ ವೃದ್ಧಿಗೆ ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಜಿಲ್ಲೆ ಭಾವೈಕ್ಯತೆಗೆ ಹೆಸರಾಗಿದ್ದು, ಇದನ್ನು ಉಳಿಸಿ ಬೆಳಸಿಕೊಂಡು ಹೋಗಲು ಹಿಂದೂ- ಮುಸ್ಲಿಮರು ಸಾಮರಸ್ಯಕ್ಕಾಗಿ ಒಂದಾಗಿ ಭಾವೈಕ್ಯತೆ ಮೆರೆಯಬೇಕೆಂದು ಹೇಳಿದ ಅವರು, ಒಂದಾಗಿ ಬಾಳುವುದರಲ್ಲಿ ಸೌಹಾರ್ದತೆ ಇರಲಿದ್ದು, ಸುಂದರ ಸಮಾಜ ದೇಶ ಕಟ್ಟಲು ಸಾಧ್ಯ ಎಂದು ಹೇಳಿದರು.
ಸಭೆಯಲ್ಲಿ ಲಾಯಕ ಬಾದಲ್ ಹುಸೇನ್, ಗುಲಾಮ ಜಿಲಾನಿ, ಅಬ್ದುಲ್ ಕರೀಂ, ಅಯ್ಯಣ್ಣ ಹುಂಡೇಕಾರ್, ಮಹೇಂದ್ರಗೌಡ ಹಳ್ಳಳ್ಳಿ, ನಾಗರಾಜ ಬಿರನೂರ್ ಸೇರಿದಂತೆ ಹಿರಿಯ ಮುಖಂಡರು ಇದ್ದರು.