ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸ್ವಾಮಿ ವಿವೇಕಾನಂದ ಮಾನವೀಯತೆಯ ಪ್ರತಿಪಾದಕ

Lingaraj Badiger
Updated On : 13 Jan 2014, 11:23 am

ಕನ್ನಡಪ್ರಭ ವಾರ್ತೆ  ಯಾದಗಿರಿ  ಜ.12
ಸ್ವಾಮಿ ವಿವೇಕಾನಂದರು ಜನಸಾಮಾನ್ಯರ, ಬಡವರ ಬಗ್ಗೆ ಕಾಳಜಿ ಹೊಂದಿದ್ದರು. ಅದಕ್ಕಿಂತ ಮುಖ್ಯವಾಗಿ ಮಾನವೀಯತೆಯ ಪ್ರತಿಪಾದಕರಾಗಿದ್ದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪ್ರಭು ಕಣ್ಣನ್ ಹೇಳಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ವಿವೇಕಾನಂದರು ಇಡೀ ದೇಶ ಮಾತ್ರವಲ್ಲ, ಜಗತ್ತೇ ಬಹಳ ಗೌರವಾದರಗಳಿಂದ ನೆನಪಿಸಿಕೊಳ್ಳುತ್ತದೆ. ವಿದೇಶದಲ್ಲಿನ ಅವರ ಭಾಷಣ ಭಾರತೀಯರೆಲ್ಲರೂ ಹೆಮ್ಮೆ ಪಡುವಂಥದ್ದು. ಅಂದು ಭಾರತೀಯ ಸಂಸ್ಕೃತಿ ಹಾಗೂ ತತ್ವಜ್ಞಾನಕ್ಕೆ ವಿದೇಶಿಯರಿಂದಲೂ ಜೈಕಾರ, ಗೌರವವನ್ನು ದೊರಕಿಸಿಕೊಟ್ಟಿದ್ದರು.
ವಿವೇಕಾನಂದರ ಮೌಲ್ಯ ಮೈಗೂಡಿಸಿಕೊಳ್ಳಿ: ಜಗದ ಮಾನವೀಯತೆ ಬೆಳಕು, ಸರ್ವ ಧರ್ಮಗಳ ನೆಲೆವೀಡು ನಮ್ಮ ದೇಶ ಎಂದ ಅವರ ಜೀವನ ಮೌಲ್ಯಗಳು ಹಾಗೂ ಸಂದೇಶಗಳು ನಮ್ಮೆಲ್ಲರಿಗೆ ಅನುಕರಣೀಯ. ಅವುಗಳ ಪೈಕಿ ಕೆಲವನ್ನಾದರೂ ನಮ್ಮ ಯುವಜನತೆ ಮೈಗೂಡಿಕೊಂಡರೆ, ಅದುವೇ ಸ್ವಾಮಿ ವಿವೇಕಾನಂದರಿಗೆ ಗೌರವ ಸಲ್ಲಿಸಿದಂತೆ ಎಂದು ಹೇಳಿದರು.
ತಮ್ಮ ಅಲ್ಪಾವಧಿಯಲ್ಲಿಯೇ ಅಗಾಧ ಸಾಧನೆ ಮಾಡಿದ ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ತಮ್ಮ ಶಕ್ತಿಯುತ ವ್ಯಕ್ತಿತ್ವ, ಪ್ರಭಾವಪೂರ್ಣ ಮಾತುಗಳ ಮೂಲಕ ವಿದೇಶದಲ್ಲಿಯೂ ರಾಷ್ಟ್ರಚೇತನವನ್ನು ಜಾಗೃತಿಗೊಳಿಸಿದರು. ಯುವಕರಲ್ಲಿ ನವೋತ್ಸಾಹವನ್ನು ಕರೆಳಿಸಿ, ಅವರಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯನ್ನು ರೂಢಿಸಿ, ನವಭಾರತ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟರು. ದೇಶವನ್ನು ಸದೃಢ ರಾಷ್ಟ್ರವನ್ನಾಗಿಸಬೇಕಿದ್ದಲ್ಲಿ, ಭವಿಷ್ಯದ ಶಕ್ತಿಯೆಂದೇ ಬಿಂಬಿಸಲ್ಪಡುವ ಯುವಜನತೆಯನ್ನು ಸತ್ಕಾರ್ಯಗಳಿಗೆ ಪ್ರೇರೇಪಿಸಬೇಕಾಗಿದೆ. ಅಂದಾಗ ಮಾತ್ರ ಯುವಕರು ಪ್ರಗತಿ ಸಾಧಿಸಲು ಸಾಧ್ಯ ಎಂದು ಹೇಳಿದರು.
ಯುವಕರಲ್ಲಿ ಆತ್ಮಸ್ಥೈರ್ಯ: ಜೆಸ್ಕಾಂ ಅಧಿಕಾರಿ ಎಇಇ ಸಂಜೀವಕುಮಾರ ಬೊಸಗೇಕರ್ ಮಾತನಾಡಿ, ವೀರಸನ್ಯಾಸಿ ಸ್ವಾಮಿ ವಿವೇಕಾನಂದರ ತತ್ವಗಳು ಇಂದಿನ ಯುವಕರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುತ್ತವೆ. ಜಗತ್ತಿಗೆ ಭಾರತೀಯ ಸಂಸ್ಕೃತಿ ಪರಿಚಯಿಸಿದವರು ಸ್ವಾಮಿ ವಿವೇಕಾನಂದರು. ಜಗದ ಮಾನವೀಯತೆಯ ಬೆಳಕು, ಸರ್ವಧರ್ಮಗಳ ನೆಲೆವೀಡು ನಮ್ಮ ಭಾರತ ದೇಶ ಎಂದು ಹೇಳುವ ಮೂಲ ಇಡೀ ಪ್ರಪಂಚವೇ ನಿಬ್ಬೆರಗಾಗುವಂತೆ ಮಾಡಿದರು. ಅಂತಹ ಮಹಾನ್ ಸನ್ಯಾಸಿಯನ್ನು ಇಡೀ ಜಗತ್ತು ಸ್ಮರಿಸಿಕೊಳ್ಳುತ್ತದೆ  ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಸಿ.ಎಂ. ಪಟ್ಟೇದಾರ ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನ ಮೌಲ್ಯಗಳು ಹಾಗೂ ಸಂದೇಶಗಳು ನಮ್ಮೆಲ್ಲರಿಗೆ ಅನುಕರಣೀಯವಾಗಿವೆ. ಅವುಗಳ ಪೈಕಿ ಕೆಲವನ್ನಾದರೂ ನಮ್ಮ ಯುವಜನತೆ ಜೀವನದಲ್ಲಿ ಮೈಗೂಡಿಸಿಕೊಂಡರೆ ಸ್ವಾಮಿ ವಿವೇಕಾನಂದರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಚಾಲಕ ರಾಘವೇಂದ್ರ, ದೈಹಿಕ ಶಿಕ್ಷನಾಧಿಕಾರಿ ಶಮಕರ ಸೋನಾರ್, ಶಿಕ್ಷಕ ಹಣಮಯ್ಯ ಕಲಾಲ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಸಿಬ್ಬಂದಿ ಎಂ.ಎಚ್ ಜೋಷಿ, ತಿಪ್ಪಣ್ಣ ಸೇರಿದಂತೆ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement