ಇಂದಿನಿಂದ ಮೈಲಾಪುರ ಮಲ್ಲಯ್ಯನ ಜಾತ್ರೆ
ಗುರುಮಠಕಲ್: ಯಾದಗಿರಿ ತಾಲೂಕಿನ ಮೈಲಾಪುರದಲ್ಲಿ ಜ.14ರಿಂದ 18ರವರೆಗೆ ಮೈಲಾರಲಿಂಗೇಶ್ವರ ಜಾತ್ರೆ ನಡೆಯಲಿದೆ. ಯಾದಗಿರಿಯಿಂದ 18 ಕಿ.ಮೀ. ದೂರದಲ್ಲಿರುವ ಮೈಲಾಪುರದ ಹೇಮತಟಕ ಮಣಿಚೂಡ ಪರ್ವತದ ಮೇಲೆ ಗುಹಾಂತರ ದೇವಾಲಯದಲ್ಲಿ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಜರುಗಲಿದೆ. 14ರಂದು ಬೆಳಗ್ಗೆ ಮಲ್ಲಯ್ಯ, ಗಂಗಿ ಮಾಳಮ್ಮ ಮೂರ್ತಿ ಪಲ್ಲಕ್ಕಿಯಲ್ಲಿಟುಕೊಂಡು ಹೊನ್ನಕೆರೆಗೆ ತೆರಳಿ ಅಲ್ಲಿ ಗಂಗಸ್ನಾನ ಮುಕ್ತಾಯಗೊಂಡ ಬಳಿಕ ಪಲ್ಲಕ್ಕಿಯನ್ನು ಮೆರವಣಿಗೆ ಮೂಲಕವಾಗಿ ದೇವಸ್ಥಾನಕ್ಕೆ ತರಲಾಗುತ್ತದೆ. ನಂತರ ಸರಪಳಿ ಕಡಿಯುವ ಕಾರ್ಯಕ್ರಮ ಜರುಗಲಿದೆ.
ಸುಮಾರು 9 ದಿನಗಳ ಕಾಲ ನಡೆಯುವ ಜಾತ್ರೆಗೆ ರಾಜ್ಯದಿಂದ ಅಷ್ಟೇ ಅಲ್ಲ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಲಕ್ಷಾಂತರ ಭಕ್ತಾದಿಗಳು ಇಲ್ಲಿಗೆ ಆಗಮಿಸಿ ಸ್ವಾಮಿ ದರ್ಶನ ಪಡೆದು ಪುನೀತರಾಗುತ್ತಾರೆ.
ವಿಚಿತ್ರ ಆಚರಣೆಗಳ ಗ್ರಾಮ: ಮೈಲಾಪುರ ವಿಚಿತ್ರ ನಂಬಿಕೆಗಳ ಊರು. ಗ್ರಾಮದಲ್ಲಿ ಕೋಳಿಗಳೇ ಇಲ್ಲ ಹೊರಸು(ಕಟ್ಟಿಗೆಯ ಮಂಚ) ಇಲ್ಲ. ಕುದುರೆಗಳನ್ನು ಸಾಕುವಂತಿಲ್ಲ, ಕುಂಬಾರರು ತಮ್ಮ ಅವಿಗೆಯನ್ನು ಇಲ್ಲಿ ನಿರ್ಮಿಸುವುದಿಲ್ಲ. ಅನಾದಿ ಕಾಲದಿಂದ ಜಾತ್ರೆಯಲ್ಲಿ ಮಲ್ಲಯ್ಯನ ಪಲ್ಲಕ್ಕಿ ಮೇಲೆ ಕುರಿಗಳನ್ನು ಹಾರಿಸುವುದು ಸಂಪ್ರದಾಯವಿತ್ತು. ಆದರೆ ಕೋರ್ಟ್ ಅದೇಶದ ಹಿನ್ನೆಲೆಯಲ್ಲಿ ಕಳೆದ 2 ವರ್ಷಗಳಿಂದ ಕುರಿ ಹಾರಿಸುವುದನ್ನು ಜಿಲ್ಲಾಡಳಿತ ಸಂಪೂರ್ಣ ನಿಷೇಧ ಮಾಡಿದೆ.