ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಾಮಾಜಿಕ ಮೊದಲ ಆಧ್ಯಾತ್ಮಿಕ ಗುರು ಸಿದ್ದರಾಮೇಶ್ವರ

Rashmi Kasaragodu
Updated On : 14 Jan 2014, 11:50 am

ಶಹಾಪುರ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 12ನೇ ಶತಮಾನದ ಬಸವಣ್ಣನವರ ಸಾಮಾಜಿಕ ಕ್ರಾಂತಿಯ ವಿಚಾರಧಾರೆಗಳನ್ನು ಮುನ್ನೆಡೆಸಿದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಲಾಯಿತು.ಸುಮಾರು 68 ಸಾವಿರ ವಚನಗಳನ್ನು ರಚಿಸಿ, ಸಮಾಜದಲ್ಲಿಯ ಜಾತಿ ಪದ್ಧತಿ ನಿರ್ಮೂಲನೆ, ಬಾಲ್ಯವಿವಾಹ ನಿಷೇಧ ಹಾಗೂ ಅಂತರ್ ಜಾತಿ ವಿವಾಹಕ್ಕೆ ಪ್ರೋತ್ಸಾಹಿಸಿದ ಶ್ರೀಗಳು ಜನಪರ ಕೆಲಸಗಳಾದ ಕುಡಿಯುವ ನೀರಿನ ಯೋಜನೆ ಮತ್ತು ಹಸಿದವರಿಗೆ ಅನ್ನ ದಾಸೋಹ ಮಾಡಿದ ಮೊದಲ ಸಮಾಜಿಕ ಆಧ್ಯಾತ್ಮಿಕ ಗುರು ಅವರಾಗಿದ್ದರು ಎಂದು ಪ್ರಾಚಾರ್ಯ ಚಂದ್ರಶೇಖರ ದೊಡ್ಡಮನಿ ಹೇಳಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರುಗಳಾದ ಶಕುಂತಲಾ, ಹನ್ನಮ್ಮ, ಭವಾನಿ, ಆಶಾ ಬಿ.ಎಸ್, ಗುರುಲಿಂಗಪ್ಪ ಮದ್ದರಕಿ, ಎಂ.ಎಸ್.ಸಜ್ಜನ, ಪ್ರಕಾಶ, ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.



ಹಬ್ಬಗಳಿಗೆ ಸಚಿವರಿಂದ ಶುಭಾಶಯ
ಯಾದಗಿರಿ: ಜವಳಿ, ಬಂದರು, ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಾಬುರಾವ ಚಿಂಚನಸೂರು ಅವರು ಮಕರ ಸಂಕ್ರಾಂತಿ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಾಡಿನ ಜನತೆಗೆ ಶುಭಾಷಯ ಕೋರಿದ್ದಾರೆ. ಈ ಎರಡು ಹಬ್ಬಗಳು ನಾಡಿನ ಜನತೆಗೆ ಸುಖ ಹಾಗೂ ಸಮೃದ್ಧಿ ತರಲೆಂದು ತಿಳಿಸಿದ್ದಾರೆ.
'ಲೋಕಸಭಾ ಚುನಾವಣೆ ಗೆಲುವೇ ನಮ್ಮ ಗುರಿ'
ಗುರುಮಠಕಲ್: ಲೋಕಸಭಾ ಚುನಾವಣೆಗೆ ಪಕ್ಷ ಸಂಘಟಿಸಲು ಇಂದಿನಿಂದ ಕಾರ್ಯತಂತ್ರ ರೂಪಿಸಲಾಗುತ್ತಿದ್ದು, ಚುನಾವಣೆಯಲ್ಲಿ ಗೆಲುವೇ ನಮ್ಮ ಗುರಿಯಾಗಿದೆ ಎಂದು ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಯುವ ಘಟಕದ ನೂತನ ಅಧ್ಯಕ್ಷ ರಾಘವೇಂದ್ರ ಮಾನಸಗಲ್ ಹೇಳಿದರು. ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರತಿಯೊಂದು ಹಳ್ಳಿಗಳಿಗೆ ತಲುಪಿಸುವ ಕೆಲಸ ಮಾಡಲು ಯುವಕರ ತಂಡ ರಚಿಸಲಾಗುವುದು ಎಂದು ತಿಳಿಸಿದರು. ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಸೋಮಶೇಖರ ಮಸಕನಹಳ್ಳಿ ಮಾತನಾಡಿ, ಪಕ್ಷ ಸಂಘಟನೆಯ ದೃಷ್ಟಿಯಿಂದ ನಮ್ಮನ್ನು ಆಯ್ಕೆ ಮಾಡಿದ ಪಕ್ಷದ ಯುವ ಮಿತ್ರರ ಕೈಜೋಡಿಸಿ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು. ಯುವ ಘಟಕದ ಮಾಜಿ ಅಧ್ಯಕ್ಷ ಶಿವರಾಜ ಜಕಾತಿ ಮಾತನಾಡಿದರು. ಶ್ರೀನಿವಾಸರಡ್ಡಿ ಕಂದಕೂರ, ಸುರೇಶ ಜೈನ್, ಖಾಜಾ ಬಂದೇನವಾಜ್ ಇದ್ದರು.
ಕ್ರೈಸ್ತ ಶಿಲುಬೆ ಕಟ್ಟೆ ದ್ವಂಸ: ಕಿಡಿಗೇಡಿಗಳ ಬಂಧನಕ್ಕೆ ಮನವಿ
:ಶಹಾಪುರ: ಇತ್ತೀಚಿಗೆ ಯಾದಗಿರಿ ತಾಲೂಕಿನ ಠಾಣಾಗುಂದಿಯಲ್ಲಿ ಕ್ರೈಸ್ತ ಸಮುದಾಯಕ್ಕೆ ಸೇರಿದ ಶಿಲುಬೆ ಕಟ್ಟೆಯನ್ನು ದ್ವಂಸಗೊಳಿಸಿ ಸಮಾಜದ ಸ್ವಾಸ್ಥ್ಯ ಕೆಡೆಸಲು ಯತ್ನಿಸಿದ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ನೀಡಬೇಕೆಂದು ಜಿಲ್ಲಾಧಿಕಾರಿಗೆ ಸಿಪಿಐಎಂ ಪಕ್ಷದ ತಾಲೂಕಾ ಕಾರ್ಯದರ್ಶಿ ಎಸ್.ಎಂ. ಸಾಗರ ಮನವಿ ಸಲ್ಲಿಸಿದ್ದಾರೆ. ಕ್ರೈಸ್ತ ಸಮುದಾಯಗಳ ಮೇಲೆ ಹಿಂದೆ ಬಿಜೆಪಿ ಸರ್ಕಾರವಿದ್ದ ದಿನಗಳಲ್ಲಿಯು ನಿರಂತರ ಕೃತ್ಯಗಳು ನಡೆದಿದ್ದು ಸದ್ಯದ ಸ್ಥಿತಿಯಲ್ಲಿಯು ಶಾಂತಿಭಂಗ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ಸೂಕ್ತ ತನಿಖೆಗೆ ಮುಂದಾಗಬೇಕು. ಧ್ವಂಸಗೊಂಡಿರುವ ಕಟ್ಟೆಯನ್ನು ಪುನಾ ನಿರ್ಮಾಣ ಮಾಡಬೇಕೆಂದು ಎಸ್.ಎಂ. ಸಾಗರ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement