ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ
ಸುರಪುರ: ಇಲ್ಲಿಯ ವಿಧಾನಸೌಧದ ಎದುರು ಜೈ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕವು ನಾನಾ ಬೇಡಿಕೆಗಳಿಗೆ ಒತ್ತಾಯಿಸಿ ಸೋಮವಾರ ಪ್ರತಿಭಟನೆ ಮಾಡಿತು.
ಈ ಸಂದರ್ಭದಲ್ಲಿ ಜೈ ಕರವೇ ಮುಖಂಡರು ಮಾತನಾಡಿ, ನಾರಾಯಣಪುರ ಎಡದಂಡೆ ಕಾಲುವೆಗೆ ಈ ಮುಂಚೆ ಸರ್ಕಾರ ಘೋಷಿಸಿದಂತೆ ಏ. 20ರವರೆಗೆ ಕಾಲುವೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಪುರಸಭೆಯ ವಸತಿ ಯೋಜನೆಯಲ್ಲಿ ಮನೆ ಕಟ್ಟಿದ ಫಲಾನುಭವಿಗಳಿಗೆ ಚೆಕ್ ನೀಡದೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ಕ್ರಮ ಜರುಗಿಸಬೇಕು ಮತ್ತು ಪಟ್ಟಣದ ಮೂಲ ಸೌಕರ್ಯಗಳಿಗೆ ಒತ್ತು ನೀಡಬೇಕು ಎಂದು ತಿಳಿಸಿದರು.
ಆಗ್ರಹ: ತಾಲೂಕಿನಲ್ಲಿ ಎಲ್ಲಿಯೂ ಸಾಂಸ್ಕೃತಿಕ ಭವನವಿಲ್ಲದ ಕಾರಣ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ತೊಂದರೆಯಾಗಿದೆ. ತ್ವರಿತವಾಗಿ ಸಾಂಸ್ಕೃತಿಕ ಭವನ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಇಲ್ಲಿಯ ಎಪಿಎಂಸಿಯಲ್ಲಿ ರೈತರು ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿನ ಅಕ್ರಮ ತಡೆಗೆ ಸರ್ಕಾರ ಮುಂದಾಗಬೇಕು. ಹೊರಗಿನ ಖರೀದಿದಾರರು ಬರಲು ಅನುವು ಮಾಡಿಕೊಡಬೇಕು ಎಂದು ಕೋರಿದರು.
ಮನವಿ ಸಲ್ಲಿಕೆ: ರೈತರು ಬೆಳೆದ ತೊಗರಿ, ಹತ್ತಿ, ಶೇಂಗಾ ಹಾಗೂ ಭತ್ತಕ್ಕೆ ಸ್ವಾಮಿನಾಥನ್ ವರದಿಯ ವೈಜ್ಞಾನಿಕ ಹಾಗೂ ಬೆಂಬಲ ಬೆಲೆ ನಿಗದಿಪಡಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಒಳಗೊಂಡ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಮೂಲಕ ಸಲ್ಲಿಸಲಾಯಿತು.
ಜೈ ಕರವೇ ತಾಲೂಕು ಅಧ್ಯಕ್ಷ ಶಿವಮೋನಯ್ಯ, ನಗರ ಘಟಕದ ಅಧ್ಯಕ್ಷ ಭೀಮು ನಾಯಕ ಮಲ್ಲಿಭಾವಿ, ಮುಖಂಡರಾದ ದೇವಿಂದ್ರಪ್ಪ ಮಾಲಿ ಪಾಟೀಲ್, ಮಲ್ಲಿಕಾರ್ಜುನ ರೆಡ್ಡಿ ಅಮ್ಮಾಪುರ, ಮಹೇಶ ಯಳವಾರ, ಮಹೇಶ ರಾವೂರ್, ಭೀಮನಗೌಡ ಪೊಲೀಸ್ ಪಾಟೀಲ್, ತಿರುಪತಿ ನಾಯಕ ಅಯ್ಯಪ್ಪ, ಪರಶುರಾಮ, ಹಣಮಂತ ಇನ್ನಿತರರಿದ್ದರು.