ಸಿವಿಲ್ ಕಾಮಗಾರಿ, ಹಣಕಾಸು ವ್ಯವಹಾರಗಳಲ್ಲಿ ಶಿಕ್ಷಕರಿಗೆ ತೊಂದರೆ
ಶಹಾಪುರ: ಸಿವಿಲ್ ಕಾಮಗಾರಿ ಹಾಗೂ ಹಣಕಾಸು ವ್ಯವಹಾರಗಳಲ್ಲಿ ಅಮಾಯಕ ಶಿಕ್ಷಕರಿಗೆ ತೊಂದರೆ ಯಾಗುತ್ತಿದೆ ಎಂದು ಇತ್ತೀಚಿಗೆ ಶಹಾಪುರಕ್ಕೆ ಆಗಮಿಸಿದ್ದ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಬಸವರಾಜ ಅವರಿಗೆ ಶಹಾಪುರ ಶಿಕ್ಷಕರ ಸಂಘದ ವತಿಯಿಂದ ಮನವಿಯೊಂದನ್ನು ಸಲ್ಲಿಸಲಾಯಿತು.
ಶಾಲಾ ವ್ಯವಸ್ಥೆಯಲ್ಲಿ ಎಸ್‌ಡಿಎಂಸಿ ಮೇಲ್ವಿಚಾರಣೆ ಇದ್ದು ಇದರಲ್ಲಿ ಶಿಕ್ಷಕ ಸಿಬ್ಬಂದಿ ಮುಖ್ಯಗುರುಗಳನ್ನು ಸೇರಿಸಲಾಗುತ್ತಿದ್ದು, ಈ ಕುರಿತು ಡ್ಯುಯಲ್ ಡೆಸ್ಕ್ ಖರೀದಿ, ಸಮವಸ್ತ್ರ ಖರೀದಿ, ಸಿವಿಲ್ ಕಾಮಗಾರಿ, ಶೌಚಾಲಯ ಕಾಮಗಾರಿ, ಶಾಲಾ ಕಾಂಪೌಂಡ್ ಹತ್ತಾರು ಅಂಶಗಳಿಗೆ ಶಿಕ್ಷಕರನ್ನೆ ಹೊಣೆಗಾರರನ್ನಾಗಿ ಮಾಡಿ ಪಂಚಾಯತ್ ರಾಜ್ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಜಿಪಂ ಅಧಿಕಾರಿಗಳು ಜಿಲ್ಲಾದ್ಯಂತ ಡ್ಯುಯಲ್ ಡೆಸ್ಕ್ ಖರೀದಿಸಿದ ಶಾಲೆಗಳ ಮೇಲೆ 2 ಬಾರಿ ವಿಶೇಷ ತಂಡಗಳಿಂದ ತಪಾಸಣೆ ನಡೆಸಿ ಇದು ಜಿಪಂಗೆ ಜಿಲ್ಲೆಯ ಶಾಲೆಗಳ ಬಗ್ಗೆ ಇರುವ ಪೂರ್ವಗ್ರಹಪೀಡಿತ ಮನೋಭಾವವಾಗಿದೆ ಸಿವಿಲ್ ಕಾಮಗಾರಿಗಳನ್ನು ಕೂಡ ಎಸ್‌ಡಿಎಂಸಿ ಮೇಲ್ವಿಚಾರಣೆಯಲ್ಲಿ ಕೈಗೊಂಡಿದ್ದರೂ ಹಣಕಾಸು ವ್ಯವಹಾರಗಳಿಗೆ ಮಾತ್ರ ಶಾಲಾ ಮುಖ್ಯೋಪಾಧ್ಯಾಯರನ್ನು ಜವಾಬ್ದಾರರನ್ನಾಗಿ ಮಾಡಿ ನೋಟಿಸುಗಳನ್ನು ನೀಡುತ್ತಲೇ ಇದ್ದಾರೆ.
ಈ ದಿಸೆಯಲ್ಲಿ ಮುಖ್ಯೋಪಾಧ್ಯಾಯರು, ಶಿಕ್ಷಕರು ಶೈಕ್ಷಣಿಕ ಕಾರ್ಯಗಳಿಗಿಂದ ಹಣಕಾಸು ವ್ಯವಹಾರ ಸಿವಿಲ್ ಕಾಮಗಾರಿಗಳ ಬಗ್ಗೆ ಅತೀ ಕಾಳಜಿ ವಹಿಸಬೇಕಾಗಿದೆ. ಕಾರಣ ರಾಜ್ಯಾಧ್ಯಕ್ಷರಾದ ತಾವು ಈ ಕುರಿತು ಗಮನಿಸಿ ಮೂಲ ಸೌಕರ್ಯ, ಅಭಿವೃದ್ಧಿ ಸಿವಿಲ್ ಕಾಮಗಾರಿ ಮೊದಲಾದ ವ್ಯವಹಾರಗಳನ್ನು ಎಸ್‌ಡಿಎಂಸಿ ತ್ವರಿತವಾಗಿ ನಿರ್ವಹಿಸುವ ಮತ್ತು ಈ ಪ್ರಕ್ರಿಯೆಗಳಿಗೆ ಮುಖ್ಯೋಪಾಧ್ಯಾಯರು ಶಿಕ್ಷಕರನ್ನು ಹೊರತುಪಡಿಸುವ ಬಗ್ಗೆ ಸಂಬಂಧಿಸಿದ ಆಡಳಿತಾಧಿಕಾರಿಗಳ ಸಭೆಯಲ್ಲಿ ಸೂಕ್ತವಾಗಿ ಮಂಡಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷರಾದ ಬಸವರಾಜ ಯಾಳಗಿ ಮತ್ತು ಸಮಸ್ತ ಶಿಕ್ಷಕ ಸಮುದಾಯದ ಪ್ರತಿನಿಧಿಗಳು ಉಪಸ್ಥಿತರಿದ್ದರು.