ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ: ಶಾಸಕ
ಸುರಪುರ: ಇಂದಿನ ಯುವ ಜನಾಂಗ ದುಶ್ಚಟಕ್ಕೆ ಹೆಚ್ಚು ಒತ್ತು ಕೊಟ್ಟು ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಸಾಧಿಸಬಹುದು ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ತಿಳಿಸಿದರು.
ಇಲ್ಲಿಯ ಶ್ರೀಪ್ರಭು ಕಾಲೇಜಿನ ಮೈದಾನದಲ್ಲಿ ದಿ.ರಾಜಾ ಶ್ರೀರಾಮನಾಯಕ ಸ್ಮರಣಾರ್ಥ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಹಾರ್ಡ್ ಟೆನ್ನಿಸ್ ಬಾಲ್ ಆರ್ಕೆಎನ್ ಟ್ರೋಫಿ ಟೂರ್ನಿಮೆಂಟ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಕಿರಿಯ ಸಹೋದರ ದಿ. ರಾಜಾ ಶ್ರೀರಾಮನಾಯಕ ಕೇರಂ, ಟೇಬಲ್ ಟೆನ್ನಿಸ್ ಸೇರಿದಂತೆ ಪ್ರತಿಯೊಂದು ಆಟದಲ್ಲಿ ಚಾಂಪಿಯನ್ ಆಗಿದ್ದ. ಹಾಗೂ ಯುವ ಕ್ರೀಡಾಪಟುಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದ. ಆತನಿಗೆ ಕ್ರಿಕೆಟ್ ಅಚ್ಚುಮೆಚ್ಚಿನ ಆಟವಾಗಿತ್ತು ಎಂದು ಹೇಳಿ ತಮ್ಮನ ಆಗಲಿಕೆಗೆ ಶಾಸಕರು ಕಣ್ಣೀರು ಹಾಕಿದರು.
ಮುಖಂಡ ಸೂಲಪ್ಪ ಕಮತಗಿ, ಉಪನ್ಯಾಸಕ ಶರಣಪ್ಪ ಠಾಣಾಗುಂದಿ ಮಾತನಾಡಿದರು. ಮಾಜಿ ಸಂಸದ ರಾಜಾ ರಂಗಂಪ್ಪನಾಯಕ ಟೂರ್ನಿಗೆ ಚಾಲನೆ ನೀಡಿದರು. ಟೂರ್ನಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ 110 ತಂಡಗಳು ಹೆಸರು ನೋಂದಾಯಿಸಿವೆ. ಒಂದೂವರೆ ತಿಂಗಳು ಟೂರ್ನಿ ಜರುಗಲಿದೆ. ಪ್ರಥಮ ಬಹುಮಾನ್ ರು. 1.25 ಲಕ್ಷ ಮತ್ತು ದ್ವಿತೀಯ ಬಹುಮಾನ 71 ಸಾವಿರ ಎಂದು ಟೂರ್ನಿ ಆಯೋಜಕರು ತಿಳಿಸಿದ್ದಾರೆ. ಪ್ರಥಮ ಪಂದ್ಯ ಸುರಪುರ ಅಬಿಸಿಸಿ ಜೊತೆಗೆ ಅಮ್ಮಾಪುರದ ಮಾರುತಿ ಸಿಸಿ ತಂಡದೊಂದಿಗೆ ಜರುಗಿತು. ಪ್ರಮುಖರಾದ ದೇವಿಂದ್ರಪ್ಪ ಕಳ್ಳಿಮನಿ, ಶ್ರೀನಿವಾಸಗೌಡ ಪಾಟೀಲ್, ರಾಜಶೇಖರ ಗೌಡ ಪಾಟೀಲ್, ವಿಠ್ಠಲ ಯಾದವ್, ರಾಜಾ ಮೌನೇಶ್ವರನಾಯಕ, ಶಿವಣ್ಣ, ದತ್ತಾತ್ರೇಯ, ಪ್ರಭುಗೌಡ ಪಾಟೀಲ್, ಅಬ್ದುಲ್ ಗಫಾರ್ ನಗನೂರಿ, ಗೋಪಾಲದಾಸ ಲಡ್ಡಾ, ಬಸವರಾಜ ಜಮದ್ರಖಾನಿ, ಅಯ್ಯಣ್ಣ, ಸುದರ್ಶನ ಇದ್ದರು.