ಖಾಸಗಿ ಶಾಲೆಗಳು ನಿಗದಿತ ಮಾನದಂಡ ಪೂರೈಸಲಿ: ಬಿಇಒ
ಶಹಾಪುರ: ಉಚಿತ ಮತ್ತು ಕಡ್ಡಾಯ ಶಿಕ್ಷಣದಡಿಯಲ್ಲಿ ಖಾಸಗಿ ಶಾಲೆಗಳು ಶಿಕ್ಷಣ ಇಲಾಖೆ ನಿಗದಿ ಪಡಿಸಿದ ಮಾನದಂಡಗಳನ್ನು ಪೂರೈಸುವುದು ಕಡ್ಡಾಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ರಾಯಪ್ಪ ರೆಡ್ಡಿ ತಿಳಿಸಿದರು.
ಸ್ಥಳೀಯ ಬಿಆರ್‌ಸಿ ಕಚೇರಿಯ ಸಭಾಂಗಣದಲ್ಲಿ ಖಾಸಗಿ ಶಾಲೆಗಳ ಮುಖ್ಯಸ್ಥರ ವಿಶೇಷ ಸಭೆಯಲ್ಲಿ ಹಲವಾರು ಇಲಾಖೆಯ ಮಾಹಿತಿಗಳನ್ನು ನೀಡಿದ ಅವರು ಪ್ರತಿಯೊಂದು ಶಾಲೆಯವರೂ ತಮ್ಮ ನೆರೆಹೊರೆಯ ಮಕ್ಕಳಿಗೆ ಶಾಲಾ ಸೌಲಭ್ಯ ಒದಗಿಸಬೇಕು. ಈಗಾಗಲೇ ಉಚಿತ ಮತ್ತು ಕಡ್ಡಾಯ ಶಿಕ್ಷಣದಡಿ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ನಡೆದಿದ್ದು, ಅವಕಾಶ ವಂಚಿತ ವರ್ಗ, ದುರ್ಬಲ ವರ್ಗಕ್ಕೆ ಸೇರಿದ ಮಗುವನ್ನು ಖಾತ್ರಿ ಪಡಿಸಿಕೊಂಡು ಅವಕಾಶ ನೀಡುವ ಕಾರ್ಯ ಪಾರದರ್ಶಕವಾಗಿ ನಡೆಯಬೇಕು.
ಉದ್ದೇಶ ಪೂರೈಸಿ: ಶಿಶುವಿಹಾರ ಅಥವಾ 1ನೇ ತರಗತಿಗಳ ಪೈಕಿ ಶೇ. 25ರಷ್ಟು ಸೀಟುಗಳನ್ನು ಕಾಯ್ದಿಟ್ಟು ಅದರ ಅಡಿಯಲ್ಲಿ ದಾಖಲಾದ ಮಕ್ಕಳಿಗೆ ಹಲವು ಸೌಲಭ್ಯ ನೀಡುವ ಮೂಲಕ ಸರ್ಕಾರದ ಶೈಕ್ಷಣಿಕ ಇಲಾಖೆ ಸದುದ್ದೇಶವನ್ನು ಖಾಸಗಿ ಶಾಲೆಗಳು ಪೂರೈಸಬೇಕು. ಅದೇ ರೀತಿ ಉಳಿದ ಶೇ. 75ರ ಪ್ರಮಾಣದ ಸೀಟುಗಳನ್ನು ಭರ್ತಿ ಮಾಡಲು ನಿಯಮಗಳನ್ನು ಆಡಳಿತ ಮಂಡಳಿ ತಮ್ಮ ನಡಾವಳಿಗಳಲ್ಲಿ ನಿರ್ದಿಷ್ಟಪಡಿಸಬೇಕು. ವಿಶೇಷವಾಗಿ ಒಡಹುಟ್ಟಿದವರಿಗೆ, ವಿಕಲ ಚೇತನರಿಗೆ, ಅನಾಥರಿಗೆ, ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ಇನ್ನಿತರ ಗುಂಪುಗಳಿಗೆ ಆದ್ಯತೆಗನುಸಾರ ಆಯ್ಕೆ ಮಾಡುವಲ್ಲಿ ಕಾಳಜಿವಹಿಸಬೇಕು. ಇದರ ಜೊತೆಗೆ ಕಡ್ಡಾಯವಾಗಿ ಶಾಲೆಗಳು ಆಯಾ ತರಗತಿಯ ಪ್ರವೇಶಗಳ ಬಗ್ಗೆ ನಿಯಮಿತ ವೇಳಾಪಟ್ಟಿ ಬೋಧನಾ ಶುಲ್ಕ ಮುಂತಾದ ಮಾಹಿತಿಯನ್ನು ನೋಟಿಸ್ ಬೋರ್ಡ್‌ನಲ್ಲಿ ಲಗತ್ತಿಸಿಬೇಕು.
ಉಲ್ಲಂಘನೆಗೆ ಶಿಕ್ಷೆ: ಪ್ರವೇಶ ಪ್ರಕ್ರಿಯೆ, ಶುಲ್ಕ ವಸೂಲಿಯಲ್ಲಿ ನಿಯಮ ಮೀರಿ ನಡೆದರೆ ಅಂಥ ಶಾಲೆಗಳ ಮೇಲೆ ಕ್ರಮ ಅನಿವಾರ್ಯವಾಗಿದೆ. ಮಾನ್ಯತೆ ಪಡೆಯದೇ ಇರುವ ಶಾಲೆಗಳು ಮತ್ತು ಭಾಷಾ ನೀತಿ ಉಲ್ಲಂಘಿಸುವ ಶಾಲೆಗಳ ಬಗ್ಗೆಯು ಕಠಿಣ ಕ್ರಮ ಅನಿವಾರ್ಯವಾಗಿದೆ. ಪಾಲಕರಿಗೆ ಒತ್ತಡ ತಂದು ಅಭ್ಯಾಸಕ್ಕಿಂತಲು ಹೆಚ್ಚಿನ ಹೊರೆಯಾಗುವ ಪುಸ್ತಕ ಖರೀದಿಯ ದೂರುಗಳು ಬಾರದಂತೆ ಜಾಗೃತಿ ವಹಿಸಬೇಕು. ಪ್ರತಿಯೊಂದು ವಿಷಯಗಳನ್ನು ತಾಳ್ಮೆಯಿಂದ ನಿರ್ವಹಿಸಿಕೊಂಡು ಶೈಕ್ಷಣಿಕ ಇಲಾಖೆಯ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿ ವಿದ್ಯಾವಂಚಿತರಿಗೆ ಉತ್ತಮ ಅವಕಾಶ ಕಲ್ಪಿಸುವಲ್ಲಿ ಖಾಸಗಿ ಶಾಲೆಗಳ ಯೋಗದಾನ ಬಹುಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮನ್ವಯಾಧಿಕಾರಿ ಶಶಿಧರ ಬಿರಾದಾರ, ಶಿಕ್ಷಣ ಸಂಯೋಜಕರಾದ ರಾಮಭಟ್ ಜೋಶಿ, ರೇವಣಸಿದ್ದಪ್ಪ, ಸಂಗಣ್ಣಾ ಹೂಗಾರ, ಮಲ್ಕಣ್ಣ ಸಿಆರ್‌ಪಿ, ಚಿದಾನಂದಸ್ವಾಮಿ, ಬಾಬುರಾವ್ ಶರಣಪ್ಪ, ಶಂಕರ ಚವ್ಹಾಣ ಮಹಾದೇವಪ್ಪ ಇತರರು ಉಪಸ್ಥಿತರಿದ್ದು, ಇಲಾಖೆಯ ಕಾರ್ಯ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.