ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಉಲ್ಬಣಿಸಿದ ನೀರಿನ ಸಮಸ್ಯೆ, ನಾಗರಿಕರ ಪರದಾಟ

Rashmi Kasaragodu
Updated On : 18 Jan 2014, 12:18 pm


ಕೆಂಭಾವಿ: ಪಟ್ಟಣದ ಸಂಜೀವ ನಗರ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಜನತೆಗೆ ತೀವ್ರ ತೊಂದರೆಯಾಗಿದೆ ಎಂದು ಬಡಾವಣೆ ನಾಗರಿಕರು ದೂರಿದ್ದಾರೆ.
ಪಟ್ಟಣವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಸಂಜೀವ ನಗರ ಬಡಾವಣೆ ಹಾಗೂ ಗುತ್ತಿ ಬಸವೇಶ್ವರ ನಗರದಲ್ಲಿ ಸುಮಾರು 300ಕ್ಕೂ ಹೆಚ್ಚು ಮನೆಗಳಿವೆ. ಇಡೀ ಬಡಾವಣೆಗೆ ನಾಲ್ಕು ಕೊಳವೆ ಬಾವಿ ಇದ್ದು, ಅದೂ ಕೆಟ್ಟು ಹಲವು ದಿನಗಳೇ ಕಳೆದಿವೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಇತ್ತ ಕ್ಯಾರೆ ಅನ್ನದೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಬಡಾವಣೆಯ ಸಮೀಪವಿರುವ ಎಪಿಎಮ್ಸಿ ಬಾವಿಯಿಂದ ಕುಡಿಯುವ ನೀರಿನ ಪೈಪ್‌ಲೈನ್ ಇದ್ದರೂ, ಅದರಿಂದ ಒಂದು ಹನಿ ನೀರು ಬಂದಿಲ್ಲ. ಈ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಸರ್ಕಾರ ಗ್ರಾಮಕ್ಕೆ ರು.  24 ಲಕ್ಷ ವೆಚ್ಚದ ಕಾಮಗಾರಿ ಕೈಗೆತ್ತಿಗೊಂಡು ಒಂದು ವರ್ಷ ಗತಿಸಿದರೂ, ಯೋಜನೆ ಇನ್ನೂ ಕುಂಟುತ್ತಾ ಸಾಗಿದೆ. ಈ ಯೋಜನೆ ಸಂಪೂರ್ಣಗೊಳಿಸಲು ಮೂರು ಲಕ್ಷ ಐವತ್ತು ಸಾವಿರ ರುಪಾಯಿ ಕೊರತೆ ಇದೆ ಎನ್ನಲಾಗುತ್ತಿದೆ.
ಬವಣೆ: ಈ ಕಾಮಗಾರಿಗೆ ಜಿಪಂ ಗುಲ್ಬರ್ಗದ ಸುಪರಿಂಟೆಂಡೆಂಟ್ ಎಂಜಿನೀಯರ್ ಮಂಜೂರಿ ನೀಡದ ಪ್ರಯುಕ್ತ ಯೋಜನೆ ಮೂಲೆ ಗುಂಪಾಗಿದೆ. ಇದರಿಂದ ಸರ್ಕಾರ ಹಣ ಕೊಟ್ಟರೂ, ಸ್ಥಳೀಯ ಮಟ್ಟದ ಅಧಿಕರಿಗಳ ದಿವ್ಯ ನಿರ್ಲಕ್ಷ್ಯದಿಂದ ಯೋಜನೆ ಆಗುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಕೂಡ ತಲೆ ಕೆಡಿಸಿಕೊಳ್ಳುತ್ತಿಲ್ಲ. ಬೇಸಿಗೆ ಬರುವ ಮುನ್ನವೆ ನೀರಿನ ಬವಣೆ ಗ್ರಾಮದಲ್ಲಿ ವಿಪರೀತವಾಗಿದೆ.
ಅಧಿಕಾರಿಗಳೆಲ್ಲಿ?: ಈ ಬಡಾವಣೆಗಳಲ್ಲಷ್ಟೇ ಅಲ್ಲದೆ ಪಟ್ಟಣದ ಹಲವು ಕಡೆ ನೀರಿನ ಸಮಸ್ಯೆ ಇದ್ದು, ಕುಡಿಯುವ ನೀರು ಎರಡು ದಿನಕ್ಕೊಮ್ಮೆ ಬರುವುದರಿಂದ ಅದು ಕೂಡ ಸಮರ್ಪಕವಾಗಿ ಬಾರದೆ ಪರಿತಪಿಸುವಂತಾಗಿದೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಖುದ್ದು ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಇನ್ನೆರಡು ದಿನಗಳಲ್ಲಿ ಇಲ್ಲಿನ ನೀರಿನ ಸಮಸ್ಯೆ ಪರಿಹರಿಸದಿದ್ದರೆ, ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಬಡಾವಣೆಯ ವೀರಣ್ಣ ಕಲಕೇರಿ, ಮಲ್ಲಣ್ಣ ಕದ್ನೆಳ್ಳಿ, ದೇವಪ್ಪ ದೇವಿಕೇರಿ, ಶಾಂತಪ್ಪ ಯರಗಲ್, ಬಸಪ್ಪ ಯರಗಲ್ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement