ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಧರ್ಮದ ತಳಹದಿಯಲ್ಲೇ ಸಮಾಜ ನಿರ್ಮಾಣ ಸಾಧ್ಯ

Rashmi Kasaragodu
Updated On : 18 Jan 2014, 12:18 pm

ಕನ್ನಡಪ್ರಭ ವಾರ್ತೆ  ಜೇವರ್ಗಿ  ಜ.17
ಸಗರನಾಡು ಶರಣರ ಬೀಡು ಎಂಬಂತೆ ಭೀಮೆ-ಕೃಷ್ಣೆಯರ ಮಧ್ಯೆ ಇರುವ ಪುಣ್ಯಭೂಮಿ ಸಗರನಾಡಿನಲ್ಲಿ ಅನೇಕ ಶರಣರು, ಸಂತರು, ದಾರ್ಶನಿಕರು, ವಚನಕಾರರು, ತತ್ವಪದಕಾರರು ಆಗಿ ಹೋಗಿದ್ದಾರೆ. ಇಂತಹ ಪುಣ್ಯ ನೆಲದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ದ್ವಿತೀಯ ಸಮ್ಮೇಳನ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದು ಅಬ್ಬೆತುಮಕೂರಿನ ಸಿದ್ಧ ಸಂಸ್ಥಾನ ಮಠದ ಡಾ. ಗಂಗಾಧರ ಶಿವಾಚಾರ್ಯರು ಅಭಿಪ್ರಾಯಪಟ್ಟರು.
  ತಾಲ್ಲೂಕಿನ ಗಂವ್ಹಾರ ಗ್ರಾಮದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಜೇವರ್ಗಿ ತಾಲೂಕು ಮಟ್ಟದ ದ್ವಿತೀಯ ಶರಣ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶರಣರ ವಚನಗಳು ಮತ್ತು ವೈಚಾರಿಕ ಚಿಂತನೆಗಳನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಸುತ್ತೂರು ಶ್ರೀಗಳು ಶರಣ ಸಾಹಿತ್ಯ ಪರಿಷತ್ ಹುಟ್ಟು ಹಾಕಿದ್ದಾರೆ.
  ಸಾತ್ವಿಕ ಪರಂಪರೆಯ ನೆಲೆಗಟ್ಟಿನಲ್ಲಿ ಸಮಾಜ ನಿರ್ಮಿಸುವುದೇ ಶರಣ ಸಾಹಿತ್ಯ ಪರಿಷತ್ತಿನ ಉದ್ದೇಶ. 12ನೇ ಶತಮಾನದಲ್ಲಿನ ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯ ಇಂದಿನ ಸಮಾಜಕ್ಕೆ ದಾರಿ ದೀಪವಾಗಿವೆ. ವಚನ ಸಾಹಿತ್ಯ ಸಮಾಜಮುಖಿ ಸಾಹಿತ್ಯವಾಗಿ ಬೆಳಗುತ್ತಿದೆ. ಉತ್ಕಷ್ಟವಾದ ಸಾಹಿತ್ಯವನ್ನು ನಾಡಿಗೆ ನೀಡಿದ ಪ್ರದೇಶ ಸಗರನಾಡು ಎಂದು ಸ್ವಾಮೀಜಿ ಪ್ರತಿಪಾದಿಸಿದರು.
  ಸಾರ್ಥಕ ಬದುಕಿಗೆ ನಾವೆಲ್ಲರೂ ಸನ್ನದ್ಧರಾಗಬೇಕು: ಸಮ್ಮೇಳನದ ಅಧ್ಯಕ್ಷ ಕೆ.ಎಂ.ಮಠ ಮಾತನಾಡಿ, ಶರಣರ ಜೀವನ ಅರ್ಥ ಮಾಡಿಕೊಂಡು ಸಾರ್ಥ್ಥಕ ಬದುಕಿಗೆ ನಾವೆಲ್ಲರೂ ಸನ್ನದ್ಧರಾಗಬೇಕಾಗಿದೆ. ಶರಣರ ಸಂದೇಶ ದಿವ್ಯ ಸಂದೇಶ. ಇಂತಹ ಸಂದಿಗ್ಧ ಸಮಯದಲ್ಲಿ ಶರಣರು ಬದುಕಿ ಬಾಳಿದ ನೆಮ್ಮದಿಯ ಜೀವನದ ಕಡೆಗೆ ಮುಖ ಮಾಡಿ ನೋಡುವ ಮಹತ್ವದ ಕಾಲವು ಇಂದು ಕೂಡಿ ಬಂದಿದೆ ಎಂದು ವಿವರಿಸಿದರು.
  ಗಂವ್ಹಾರ ತ್ರಿವಿಕ್ರಮಾನಂದ ಮಠದ ಸೋಪಾನನಾಥ ಸ್ವಾಮೀಜಿ ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಅಪ್ಪಾರಾವ್ ಅಕ್ಕೋಣೆ ಆಶಯ ನುಡಿಗಳನ್ನು ಹೇಳಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಕೆ.ಎಸ್.ನಾಯಕ ಅವರು ಶರಣ ಸಾಹಿತ್ಯ ಪರಿಷತ್ತಿನ ಧ್ವಜವನ್ನು ಸಮ್ಮೇಳನಾಧ್ಯಕ್ಷ ಕೆ.ಎಂ.ಮಠ ಅವರಿಗೆ ಹಸ್ತಾಂತರಿಸಿದರು.
  ಮುಖ್ಯ ಅತಿಥಿಗಳಾಗಿ ಗಂವ್ಹಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಪುಗೌಡ ಪೊಲೀಸ್ ಪಾಟೀಲ್, ಜಿಲ್ಲಾ ನಿವೃತ್ತ ಪ್ರಧಾನ ನ್ಯಾ. ಎಸ್.ಎಂ.ರೆಡ್ಡಿ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಎಸ್.ಕೆ. ಬಿರಾದಾರ, ಜಿಪಂ ಸದಸ್ಯ ಗುರುಲಿಂಗಪ್ಪಗೌಡ ಪಾಟೀಲ್ ಮತ್ತಿತರರು ಆಗಮಿಸಿದ್ದರು.
  ಸಮ್ಮೇಳನದಲ್ಲಿ ಹಿರಿಯ ರಂಗಕರ್ಮಿ ಎಲ್. ಬಿ. ಕೆ. ಆಲ್ದಾಳ, ತಾಲ್ಲೂಕು ಕಸಾಪ ಅಧ್ಯಕ್ಷ ಶಿವಕವಿ ಹಿರೇಮಠ ಜೊಗೂರ, ಶಾಂತಯ್ಯ ಸ್ಥಾವರಮಠ ಸೇರಿದಂತೆ ಶರಣ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಸಾಹಿತಿಗಳು, ಗ್ರಾಮಸ್ಥರು, ಮಹಿಳೆಯರು ಪಾಲ್ಗೊಂಡಿದ್ದರು. ಬಲಭೀಮ ನೆಲೋಗಿ ಪ್ರಾರ್ಥಿಸಿದರು. ಶಾಂತಮೂರ್ತಿ ಗೊಂಬಿಮಠ ಸ್ವಾಗತಿಸಿದರು. ಸುನಂದಾ ಕಲ್ಲಾ ನಿರೂಪಿಸಿದರು, ಮಹಾದೇವಯ್ಯ ಸ್ಥಾವರಮಠ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement