ಬಂಡೆ ಸಾಹಸಕ್ಕೆ ತಲೆ ಬಾಗಿದ ಗಣ್ಯರು
ಶಹಾಬಾದ್: ಇಲ್ಲಿನ ನೃಪತುಂಗ ಸಾಹಿತ್ಯ, ಸಾಂಸ್ಕೃತಿಕ ವೇದಿಕೆ ವಿಜಯ ಕಂಪ್ಯೂಟರ್ ಸಹಭಾಗಿತ್ವದಲ್ಲಿ ಇತ್ತೀಚೆಗೆ ಮಲ್ಲಿಕಾರ್ಜುನ ಬಂಡೆ ನುಡಿನಮನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ತಾಪಂ ಸದಸ್ಯ ನಿಂಗಣ್ಣ ಹುಳಗೋಳಕರ್ ಸಭೆಗೆ ಚಾಲನೆ ನೀಡಿದ ನಂತರ ಗಣ್ಯರು, ಎರಡು ನಿಮಿಷ ಮೌನಾಚರಣೆ ಮಾಡಿ ಅಗಲಿದ ಅಧಿಕಾರಿಗೆ ಗೌರವ ಸೂಚಿಸಿದರು. ಹಿರಿಯ ಪ್ರಾಧ್ಯಾಪಕ ಡಾ.ಶಂಕರ ಸೋಮಯಾಜಿ ಮಾತನಾಡಿ, ಅಧಿಕಾರಿಯ ಸಾಹಸಮಯ ಬದುಕು ಇಲಾಖೆ ಹಾಗೂ ಸಾರ್ವಜನಿಕರಿಗೂ ಹೆಮ್ಮೆ ಮೂಡಿಸುವಂತಹುದು ಎಂದರು. ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಪ್ರಸನ್ನ ಮಂಡಲಗಿರಿ ಮಾತನಾಡಿ, ಬಂಡೆ ಬದುಕು, ಹೋರಾಟ ಯುವಕರಿಗೆ ಸ್ಫೂರ್ತಿ. ಅವರ ಸಾವು ಕುಟುಂಬ ಹಾಗೂ ಇಲಾಖೆಗೆ ತುಂಬಲಾರದ ನಷ್ಟ. ಕುಟುಂಬಕ್ಕೆ ಸೂಕ್ತ ಸೌಲಭ್ಯಗಳನ್ನು ಒದಗಿಸಿಕೊಟ್ಟು ಸರ್ಕಾರ ತನ್ನ ಜವಾಬ್ದಾರಿಯನ್ನು ತೋರಿಸಬೇಕು ಎಂದರು.