ಭಂಕೂರಿನಲ್ಲಿಂದು ರಕ್ತದಾನ ಶಿಬಿರ
ಶಹಾಬಾದ್: ಚಿತ್ತಾಪುರ ತಾಲೂಕಿನ ಸುಕ್ಷೇತ್ರ ಮುಗಳನಾಗಾವಿ ಕಟ್ಟಿಮನಿ ಹಿರೇಮಠದ ಪೀಠಾಧಿಪತಿ ಅಭಿನವ ಸಿದ್ಧಲಿಂಗ ಶಿವಾರ್ಚಾ ಸ್ವಾಮೀಜಿ 37ನೇ ಜನ್ಮದಿನದ ಅಂಗವಾಗಿ ಜ. 19ರಂದು ಭಂಕೂರ ಗ್ರಾಮದ ಶಾಂತನಗರದಲ್ಲಿ ಸಾರ್ವಜನಿಕರ ಉಚಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಹಾಬಾದಿನ ನೃಪತುಂಗ ಸಾಹಿತ್ಯ, ಸಾಂಸ್ಕೃತಿಕ ವೇದಿಕೆ, ಮಹಾತ್ಮಾ ಗಾಂಧಿ ಅಂಗವಿಕಲರ ವಿವಿಧೋದ್ದೇಶ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದೊಂದಿಗೆ ಗ್ರಾಮದ ಚಂದ್ರಕಾಂತ ಪಾಟೀಲ ನಿವಾಸದ ಆವರಣದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ ಶಿಬಿರ ಜರುಗಲಿದೆ. ವಿಧಾನಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ ಶಿಬಿರ ಉದ್ಘಾಟಿಸಲಿದ್ದು, ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಬಸವೇಶ್ವರ ಆಸ್ಪತ್ರೆ ರಕ್ತನಿಧಿ ಮುಖ್ಯಸ್ಥ ಡಾ.ಎಸ್.ಎಸ್. ದೇವರಮನಿ, ವೈದ್ಯಾಧಿಕಾರಿ ಡಾ.ರಮೇಶ ಕಡೆಚೂರ ಮತ್ತಿತರರು ಅತಿಥಿಗಳಾಗಿದ್ದು, ಬರಹಗಾರ ಪ್ರಸನ್ನ ಮಂಡಲಗಿರಿ ಅಧ್ಯಕ್ಷತೆ ವಹಿಸುವರು.