ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಭಂಡಾರಕೇರಿ ಮಠದಿಂದ ಐತರೇಯ ಶೋಧ ಪ್ರಕಾಶನ ಪೀಠ: ವಿದ್ಯೇಶತೀರ್ಥ

Rashmi Kasaragodu
Updated On : 19 Jan 2014, 11:23 am

ಕ.ಪ್ರ. ವಾರ್ತೆ    ಗುಲ್ಬರ್ಗ    ಜ.18
ಭಂಡಾರಕೇರಿ ಮಠಾಧೀಶರಾದ ವಿದ್ಯೇಶತೀರ್ಥರ ಷಷ್ಠ್ಯಬ್ಧಿ ಮಹೋತ್ಸವದ ಅಂಗವಾಗಿ ಐತರೇಯ ಶೋಧ ಪ್ರಕಾಶನ ಪೀಠ ಸ್ಥಾಪನೆಯಾಗಲಿದೆ. ಈ ಪೀಠದಡಿಯಲ್ಲಿ ನಿರಂತರ ಗ್ರಂಥ ಪ್ರಕಾಶನ, ಗುರುಕುಲಗಳಿಗೆ ಅನುದಾನ, ಪುರಾತನ ತಾಳೆಗರಿ ಗ್ರಂಥಗಳ ಸಂಶೋಧನೆ, ಕೃತಿಗಳಿಗೆ ಪುರಸ್ಕಾರ, ಕೃತಿ ಪುನರ್ ಮುದ್ರಣದಂತಹ ಕೆಲಸಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಂಕಲ್ಪಿಸಲಾಗಿದೆ. ತಮ್ಮ ಷಷ್ಠ್ಯಬ್ಧಿ ನಿಮಿತ್ತ ಈ ಪೀಠ ತಲೆ ಎತ್ತುತ್ತಲಿದ್ದು ಆರಂಭದಲ್ಲಿ 5 ಕೋಟಿ ರೂ. ನಿಧಿ ಸಂಗ್ರಹಿಸುವ ಗುರಿ ಇದೆ. ಈ ನಿಧಿಯಿಂದ ಕೆಲಸ ಕಾರ್ಯಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ವಿದ್ಯೇಶತೀರ್ಥರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸದ್ಯ ಗುಲ್ಬರ್ಗದಲ್ಲಿ ಸಂಚಾರದಲ್ಲಿರುವ ಶ್ರೀಗಳು ಇಲ್ಲಿನ ಕೃಷ್ಣ ಮಂದಿರದಲ್ಲಿ ತಂಗಿದ್ದು ಜ. 24 ರವರೆಗೂ ಗುಲ್ಬರ್ಗದಲ್ಲಿದ್ದು ತಮಗೆ 60 ವರ್ಷ ತುಂಬಿದ ಪ್ರಯುಕ್ತ ಇಲ್ಲಿನ ಭಕ್ತರು ಏರ್ಪಡಿಸಿರುವ ತುಲಾಭಾರ, ಪಾದಯಾತ್ರೆ, ಮನೆಮನೆಗಳಲ್ಲಿಯೂ ಭಾಗವತ ಶ್ಲೋಕಗಳ ಅನುವಾದ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
ಷಷ್ಠ್ಯಬ್ಧಿ ಅಂಗವಾಗಿ 180 ವಿದ್ವಾಂಸರನ್ನು, ಪಂಡಿತರಿಗೆ ಪುರಸ್ಕಾರ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗ್ರಂಥ ಪ್ರಕಾಶನ, ವಿದ್ವಾಂಸರಿಂದ ಸಂವಾದ ಸೇರಿದಂತೆ ಹಲವು ವಿದ್ವತ್ಪೂರ್ಣ ಯೋಜನೆಗಳನ್ನು ಬೆಂಗಳೂರಿನಲ್ಲಿ ಫೆ.28ರಿಂದ ಜೂನ್ ಮಾಸಾಂತ್ಯದವರೆಗೂ ನಿರಂತರವಾಗಿ ನಡೆಸಲಾಗುತ್ತಿದೆ ಎಂದು ಶ್ರೀಗಳು ಹೇಳಿದರು.
ಬೆಂಗಳೂರಿನ ಗಿರಿನಗರದಲ್ಲಿರುವ ಭಾಗವತಾಶ್ರಮ, ಭಂಡಾರಕೇರಿ ಮಠದಲ್ಲಿ ಮತ್ತು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ, ಪೇಜಾವರ ವಿಶ್ವೇಶತೀರ್ಥರ ಅನುಗ್ರಹದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ. ವಿದ್ಯಾಮಾನ್ಯತೀರ್ಥರ ಶತಮಾನೋತ್ಸವ ಅಂಗವಾಗಿ, 180 ವಿದ್ವಾಂಸರಿಗೆ ವಿದ್ಯಾಮಾನ್ಯರಿಂದ ಸ್ಥಾಪಿತವಾಗಿರುವ ಮಾಧ್ವರಾದ್ಧಾಂತ ಸಂವರ್ಧಕ ಸಭೆಯು ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುತ್ತದೆ ಎಂದು ವಿದ್ಯೇಶತೀರ್ಥರು ಹೇಳಿದರು.
24ರಂದು ತುಲಾಭಾರ-ಉಪನ್ಯಾಸ: ಇದೇ ಸಂದರ್ಭದಲ್ಲಿ ಗುಲ್ಬರ್ಗದಲ್ಲಿರುವ ವಿದ್ಯೇಶ ತೀರ್ಥರ ಭಾಗವತ ಗೃಹೋಪನ್ಯಾಸ ಕಾರ್ಯಕ್ರಮ ನಡೆಯುತ್ತದೆ. ಜೊತೆಗೆ ಪಾದಪೂಜೆ, ಕೋದಂಡರಾಮದೇವರ ಪೂಜೆ, ತೊಟ್ಟಿಲಸೇವೆ ಕಾರ್ಯಕ್ರಮಗಳು ನಡೆಯುತ್ತವೆ. ಜ. 24 ರಂದು ಜೇವರ್ಗಿ ಕಾಲೋನಿ ರಾಯರ ಮಠದಲ್ಲಿ ವಿದ್ಯೇಶತೀರ್ಥರಿಗೆ ತುಲಾಭಾರ, ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement