ಸೇಡಂನಲ್ಲಿ ಜೀತ ಜೀವಂತ: 26 ಮಂದಿ ಬಿಡುಗಡೆ
ಗುಲ್ಬರ್ಗ: ಸೇಡಂ ಪಟ್ಟಣದ ಹೊರವಲಯದಲ್ಲಿ ಇಟ್ಟಂಗಿ ಭಟ್ಟಿಯಲ್ಲಿ ಒಡಿಶಾದಿಂದ ಜೀತದಾಳುಗಳನ್ನು ತಂದು ಅಮಾನುಷ ರೀತಿಯಲ್ಲಿ ಕೆಲಸ ತೆಗೆದುಕೊಳ್ಳುತ್ತಿರುವುದನ್ನು ಕಂಡು ಗುಲ್ಬರ್ಗ ನಗರದ ನೀರಿನ ಹಕ್ಕಿಗಾಗಿ ಜನಾಂದೋಲನ ಸಮಿತಿಯು ಈ ಕಾರ್ಮಿಕರನ್ನು ಪತ್ತೆ ಹಚ್ಚಿ ಜಿಲ್ಲಾಡಳಿತ ಹಾಗೂ ತಹಶೀಲ್ದಾರ, ಪೊಲೀಸರ ಸಹಾಯದೊಂದಿಗೆ ರವಿನಾಯಕ, ಲಕ್ಷ್ಮಣ ಬಸ್ಯಾನಾಯಕ ರಾಠೋಡ ರವಿನಾಯಕ ಚವ್ಹಾಣಗೆ ಸೇರಿದ ಇಟ್ಟಿಗೆ ಕಾರ್ಖಾನೆಯ ಮೇಲೆ ಧಿಡೀರನೇ ದಾಳಿ ಮಾಡಿ ಸುಮಾರು 26 ಜನ ಜೀತದಾಳುಗಳನ್ನು ಬಿಡುಗಡೆಗೊಳಿಸಿದರು. ಬಿಡುಗಡೆಯಾದ ಕಾರ್ಮಿಕರನ್ನು ಗುಲ್ಬರ್ಗ ನಗರ ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. 26 ಜನ ಕಾರ್ಮಿಕರ ಪೈಕಿ ಎರಡು ಬಾಲ ಕಾರ್ಮಿಕರು ಒಳಗೊಂಡಿದ್ದಾರೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಇದರಲ್ಲಿ ಕೆಲವು ಜನರಿಗೆ ಹಿಂಸೆ ನೀಡಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಸಮಸ್ತ ಕೂಲಿ ಕಾರ್ಮಿಕರ ಪಂಚನಾಮ ನಡೆಸಲಾಗಿದೆ. ಚಿತ್ರಹಿಂಸೆ ನೀಡುವ ನೂಲಕ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ. ಈ ಎಲ್ಲಾ ಘಟನೆಗಳು ಜಿಲ್ಲಾಡಳಿತ ಈ ವಿಷಯದಲ್ಲಿ ನಿರ್ಲಕ್ಷ ಮಾಡಿರುವುದಕ್ಕೆ ಕೈಗನ್ನಡಿಯಂತಿದೆ.